ತುಂಗಭದ್ರಾ ಡ್ಯಾಂನಿಂದ ನದಿಗೆ 1,22,000 ಕ್ಯುಸೆಕ್‌ ನೀರು

KannadaprabhaNewsNetwork |  
Published : Aug 20, 2025, 02:00 AM IST
19ಎಚ್‌ಪಿಟಿ1- ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ನದಿಗೆ 1,22,000 ಕ್ಯುಸೆಕ್‌ ನೀರು ಹರಿಸಲಾಗಿದ್ದು, ಹಂಪಿಯ ಸ್ನಾನಘಟ್ಟದ ಬಳಿ ರಭಸವಾಗಿ ಹರಿಯುತ್ತಿರುವ ನೀರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ 1,22,000 ಕ್ಯುಸೆಕ್‌ ನೀರು ನದಿಗೆ ಮಂಗಳವಾರ ಹರಿಸಲಾಗಿದೆ.

ಹಂಪಿಯ ಪ್ರಮುಖ ಸ್ಮಾರಕಗಳು ಜಲಾವೃತ

ಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ 1,22,000 ಕ್ಯುಸೆಕ್‌ ನೀರು ನದಿಗೆ ಮಂಗಳವಾರ ಹರಿಸಲಾಗಿದೆ. ಇದರಿಂದ ಹಂಪಿಯ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ. ಒಳಹರಿವು ಭಾರೀ ಏರಿಕೆ ಆಗಿರುವ ಹಿನ್ನೆಲೆ ತುಂಗಭದ್ರಾ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ತುಂಗಭದ್ರಾ ಮಂಡಳಿ ಮತ್ತೊಮ್ಮೆ ಅಲರ್ಟ್‌ ಸಂದೇಶ ರವಾನಿಸಿದೆ.

ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆ ಒಳಹರಿವು 1,30,000 ಕ್ಯುಸೆಕ್‌ಗೆ ಏರಿಕೆ ಆಗಿದೆ. ಜಲಾಶಯದ 26 ಕ್ರಸ್ಟ್‌ಗೇಟ್‌ಗಳಿಂದ 1,22,000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದೆ. ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಈಗಾಗಲೇ ಸೂಚನೆ ರವಾನಿಸಿದೆ.

ಈಗಾಗಲೇ ಹವಾಮಾನ ಇಲಾಖೆ ಚಿಕ್ಕಮಗಳೂರು ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಆಗುವ ಮಳೆ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತದೆ.

ಈಗಾಗಲೇ ತುಂಗಾ ಜಲಾಶಯ, ಭದ್ರಾ ಜಲಾಶಯ ಮತ್ತು ವರದಾ ನದಿಯಿಂದ ತುಂಗಭದ್ರಾ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಮಧ್ಯೆ ಜಲಾಶಯದ ಗೇಟ್‌ಗಳ ಸ್ಥಿತಿಯೂ ಸರಿಯಾಗಿಲ್ಲದ್ದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ 1,22,000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.ಹಂಪಿ ಮಂಟಪಗಳು ಮುಳುಗಡೆ:

ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿ ವಿಧಾನ ನೇರವೇರಿಸುವ ಮಂಟಪ, ಕಾಲು ಸೇತುವೆ, ಚಕ್ರತೀರ್ಥ, ಕೋದಂಡರಾಮ ಸ್ವಾಮಿ ದೇವಾಲಯ, ನದಿ ತೀರದ ಸಾಲು ಮಂಟಪಗಳು, ಕೋಟಿಲಿಂಗ, ಕಂಪಭೂಪ ಮಾರ್ಗ ಸೇರಿದಂತೆ ವಿವಿಧ ಸ್ಮಾರಕ ಮತ್ತು ಮಂಟಪಗಳು ಜಲಾವೃತ ಆಗಿವೆ. ಕೋದಂಡರಾಮ ದೇವಾಲಯಕ್ಕೆ ಅಚ್ಯುತದೇವರಾಯ ದೇವಾಲಯದ ಮಾರ್ಗ ಬಳಸಿ ಅರ್ಚಕರು ಆಗಮಿಸಿ ದೇವರ ಪೂಜೆ ನೆರವೇರಿಸುತ್ತಿದ್ದಾರೆ. ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿಬಿಡಲಾಗಿರುವ ಹಿನ್ನೆಲೆ ಹಂಪಿಯಲ್ಲಿ ತೆಪ್ಪ ಪ್ರವಾಸೋದ್ಯಮಕ್ಕೂ ಬ್ರೇಕ್‌ ಬಿದ್ದಿದೆ. ಬುಕ್ಕಸಾಗರ, ಕೋದಂಡ ರಾಮ ದೇವಾಲಯ ಸಮೀಪದಲ್ಲಿ ಹಾಕಲಾಗುತ್ತಿದ್ದ ತೆಪ್ಪವನ್ನು ಹಾಕದಂತೇ ಮೀನುಗಾರರಿಗೆ ಸ್ಥಳೀಯಾಡಳಿತ ಸೂಚನೆ ನೀಡಿದೆ.

ಹಂಪಿಯಲ್ಲಿ ಬೋಟಿಂಗ್‌ ವ್ಯವಸ್ಥೆ ಕೂಡ ಸ್ಥಗಿತಗೊಳಿಸಲಾಗಿದೆ. ನದಿ ತೀರದಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ತುಂಗಭದ್ರಾ ನದಿ ತೀರದ ಸ್ನಾನಘಟ್ಟ ಮತ್ತು ಧಾರ್ಮಿಕ ವಿಧಿವಿಧಾನ ಮಂಟಪದ ಬಳಿಯೂ ಭಕ್ತರು ಮತ್ತು ಪ್ರವಾಸಿಗರು ಓಡಾಡುತ್ತಿರುವುದು ಕಂಡು ಬಂದಿದೆ.

ತುಂಗಭದ್ರಾ ಜಲಾಶಯ ರಾಜ್ಯದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಿರುವುದರಿಂದ ಮಂತ್ರಾಲಯ, ಹಂಪಿ ಸೇರಿದಂತೆ ನದಿ ತೀರದಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಈಗಾಗಲೇ ಆಯಾ ಜಿಲ್ಲಾಡಳಿತಗಳು ಎಚ್ಚರಿಕೆ ಸಂದೇಶ ಕೂಡ ರವಾನಿಸಿವೆ. ತುಂಗಭದ್ರಾ ಮಂಡಳಿ ರಚನೆ ಮಾಡಿರುವ ಕ್ಷಿಪ್ರ ಕಾರ್ಯಪಡೆ ಕೂಡ 24/7 ಕಾರ್ಯಾಚರಿಸುತ್ತಿದೆ. ಜಲಾಶಯಕ್ಕೆ ಒಮ್ಮಲ್ಲೇ ನೀರು ಹರಿದು ಬಂದರೆ 32 ಕ್ರಸ್ಟ್‌ ಗೇಟ್‌ಗಳಿಗೂ ಧಕ್ಕೆ ಆಗದಂತೆ ವೈಜ್ಞಾನಿಕ ತಳಹದಿ ಆಧಾರದ ಮೇಲೆ ತಾಂತ್ರಿಕ ಪರಿಣತ ಎಂಜನಿಯರ್‌ಗಳೊಂದಿಗೆ ಗೇಟ್‌ಗಳನ್ನೂ ಆಪರೇಟ್‌ ಮಾಡಲಾಗುತ್ತಿದೆ.ಮಳೆ ಮಾಹಿತಿ ಪಡೆದ ಜಿಲ್ಲಾಧಿಕಾರಿ

ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 19ನೇ ಗೇಟ್‌ಗೆ ಈಗಾಗಲೇ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿದೆ. ಇನ್ನೂ ಉಳಿದ 32 ಗೇಟ್‌ಗಳ ಪೈಕಿ ಏಳು ಗೇಟ್‌ಗಳು ಜಾಂ ಆಗಿರುವ ಹಿನ್ನೆಲೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಖುದ್ದು ಹವಾಮಾನ ಇಲಾಖೆಗೆ ಕರೆ ಮಾಡಿ, ಚಿಕ್ಕಮಗಳೂರು, ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಮುಂಡರಗಿ ಭಾಗದಲ್ಲಿ ಮಳೆ ಸಾಧ್ಯತೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಆ.20ರಿಂದ ಮಳೆ ಪ್ರಮಾಣ ಕಡಿಮೆ ಆಗಲಿದೆ ಎಂಬ ಸಂದೇಶ ಸಿಕ್ಕಿದೆ. ಡ್ಯಾಂಗೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಹರಿದು ಬಾರದಂತೆ ವರುಣದೇವ ಕೃಪೆ ತೋರಲಿ ಎಂದು ಜಲಾಶಯ ನೆಚ್ಚಿರುವ ರೈತರು ಕೂಡ ಮೇಘರಾಜನ ಮೊರೆ ಹೋಗಿದ್ದಾರೆ. ಜಲಾಶಯಕ್ಕೆ ಧಕ್ಕೆಯಾಗದಂತೆ ಮಳೆ ಸುರಿಯಲಿ ಎಂದು ರೈತರು ಕೂಡ ತಮ್ಮ ಮನೆ ದೇವರುಗಳಿಗೆ ಹರಕೆ ಹೊತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!