ಮಡಿಕೇರಿ ದಸರಾಗೆ ರು.1.50 ಕೋಟಿ, ಗೋಣಿಕೊಪ್ಪಕ್ಕೆ 75 ಲಕ್ಷ ರು. ಅನುದಾನ ಬಿಡುಗಡೆ

KannadaprabhaNewsNetwork | Published : Oct 3, 2024 1:25 AM

ಸಾರಾಂಶ

ಮೊದಲ ಬಾರಿಗೆ ಕೊಡಗು ಜಿಲ್ಲೆಯ ದಸರಾ ಉತ್ಸವಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಮಡಿಕೇರಿ ದಸರಾಗೆ 1.50 ಕೋಟಿ ರು. ಹಾಗೂ ಗೋಣಿಕೊಪ್ಪ ದಸರಾಗೆ 75 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೊದಲ ಬಾರಿಗೆ ಕೊಡಗು ಜಿಲ್ಲೆಯ ದಸರಾ ಉತ್ಸವಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಮಡಿಕೇರಿ ದಸರಾಗೆ 1.50 ಕೋಟಿ ರು. ಹಾಗೂ ಗೋಣಿಕೊಪ್ಪ ದಸರಾಗೆ 75 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಸರ್ಕಾರದ ಗಮನ ಸೆಳೆಯುವ ಮೂಲಕ ಹೆಚ್ಚಿನ ಅನುದಾನ ಬಿಡುಗಡೆಗೆ ಕಾರಣಕರ್ತರಾದ ಶಾಸಕರಾದ ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರಿಗೆ ದಸರಾ ಸಮಿತಿ ಅಭಿನಂದಿಸಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಹೊರತುಪಡಿಸಿದರೆ ಇಡೀ ರಾಜ್ಯದಲ್ಲೇ ಅದ್ಧೂರಿ ಹಾಗೂ ಸಂಭ್ರಮದಿಂದ ನಡೆಯುವ ದಸರಾ ಅಂದರೆ ಅದು ಮಂಜಿನ ನಗರಿ ಮಡಿಕೇರಿ ದಸರಾ ಜನೋತ್ಸವ. ಹಾಗೆಯೇ ಇದರ ಸಾಲಿನಲ್ಲೇ ಕೊಡಗಿನ ಗೋಣಿಕೊಪ್ಪ ದಸರಾ ಕೂಡ ಇದೆ. ಸದ್ಯ ಮಡಿಕೇರಿ ಹಾಗೂ ಗೋಣಿಕೊಪ್ಪ ಸದ್ಯ ದಸರಾ ಕ್ಷಣಗಣನೆಗೆ ಸಾಕ್ಷಿಯಾಗಲು‌ ಮದುವಣಗಿತ್ತಿಯಂತೆ ತಯಾರಾಗಿದೆ. ಮಡಿಕೇರಿಗೆ ಕಳೆದ ಬಾರಿಗಿಂತ ಐವತ್ತು ಲಕ್ಷ ರು. ಹೆಚ್ಚು ಅನುದಾನ ದೊರಕಿದರೆ, ಗೋಣಿಕೊಪ್ಪ ದಸರಾ ಉತ್ಸವಕ್ಕೆ 25 ಲಕ್ಷ ರು. ಹೆಚ್ಚುವರಿ ಹಣ ಈ ಬಾರಿ ಬಿಡುಗಡೆ ಮಾಡಲಾಗಿದೆ.

ಇದು ದಸರಾ ಸಮಿತಿಗಳ ಹುಮ್ಮಸ್ಸು ಹೆಚ್ಚಿಸಿದ್ದು, ಈ ಬಾರಿ ಅತ್ಯಂತ ಅದ್ಧೂರಿ ಹಾಗೂ ವಿಭಿನ್ನವಾಗಿ ದಸರಾ ಆಯೋಜಿಸಲು ಸಮಿತಿಗಳು ತಯಾರಿ ಮಾಡಿಕೊಂಡಿವೆ ಎಂದು ಕೊಡಗು ಜಿಲ್ಲಾಧಿಕಾರಿ ಹಾಗೂ ದಸರಾ ಸಮಿತಿ ಅಧ್ಯಕ್ಷ ವೆಂಕಟರಾಜ ತಿಳಿಸಿದ್ದಾರೆ.

ಇಂದು ಮಡಿಕೇರಿ ಕರಗ ಉತ್ಸವಕ್ಕೆ ಚಾಲನೆಮಡಿಕೇರಿ ನಗರದ ಇತಿಹಾಸ ಪ್ರಸಿದ್ದ 4 ಶಕ್ತಿ ದೇವತೆಗಳ ಕರಗಗಳ ಉತ್ಸವ ಗುರುವಾರ ಆರಂಭವಾಗಲಿದೆ. ಸಂಜೆ 5ಕ್ಕೆ ಮಹದೇವಪೇಟೆಯ ಪಂಪಿನಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಂಡು ಮಡಿಕೇರಿ ದಸರಾಗೆ ಚಾಲನೆ ದೊರೆಯಲಿದೆ ಎಂದು ನಗರ ದಸರಾ ಸಮಿತಿ ಗೌರವ ಕಾರ್ಯದರ್ಶಿ ಹಾಗೂ ನಗರಸಭೆ ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.

Share this article