ರಾಂ ಅಜೆಕಾರು
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಸುಮಾರು ₹1.60 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಕಾರ್ಕಳ ತಾಲೂಕಿನ ನೀರೆ, ಮುಡಾರು, ಮಾಳ, ಸಾಣೂರು, ಕಡ್ತಲ, ದುರ್ಗಾ, ಮಿಯ್ಯಾರು, ಶಿರ್ಲಾಲು, ಮರ್ಣೆ ಸೇರಿದಂತೆ 36 ಶಾಲೆಗಳು ಹಾಗೂ ಹೆಬ್ರಿ ತಾಲೂಕಿನ 15 ಶಾಲೆಗಳು ಈ ಪಟ್ಟಿಯಲ್ಲಿ ಸೇರಿವೆ.
ಈ ಶಾಲೆಗಳ ಬಹುತೇಕ ಕಟ್ಟಡಗಳು ಸುಮಾರು 40 ವರ್ಷಗಳಿಗೂ ಹಿಂದಿನ ಹೆಂಚಿನ ಕಟ್ಟಡಗಳಾಗಿದ್ದು, ಮಳೆಗಾಲದಲ್ಲಿ ನೀರು ಸೋರುವ ಸಮಸ್ಯೆ ಎದುರಿಸುತ್ತಿವೆ. ಕೆಲವು ಶಾಲೆಗಳಲ್ಲಿ ಮೇಲ್ಛಾವಣಿ ಮತ್ತು ಗೋಡೆಗಳು ಹಾಳಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಬಿರುಗಾಳಿ ಹಾಗೂ ಭಾರೀ ಮಳೆಯ ಸಂದರ್ಭಗಳಲ್ಲಿ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚಿದೆ.ಶಾಲೆಗಳಲ್ಲಿ ಮೇಲ್ಛಾವಣಿ ದುರಸ್ತಿ, ಕಟ್ಟಡಗಳ ನವೀಕರಣ, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆ ಸೇರಿದಂತೆ ವಿವಿಧ ಕಾಮಗಾರಿಗಳ ಅಗತ್ಯವಿದೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚುವರಿ ತರಗತಿ ಕೊಠಡಿಗಳು ಹಾಗೂ ಹೊಸ ಕಟ್ಟಡಗಳ ನಿರ್ಮಾಣದ ಅಗತ್ಯವೂ ಕಂಡುಬಂದಿದೆ.
ಪ್ರಸ್ತುತ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಈ ಸರ್ಕಾರಿ ಶಾಲೆಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಈ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಸುರಕ್ಷಿತ ಮತ್ತು ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ಅಗತ್ಯವಿದೆ.
-ಡಾ. ಅಶೋಕ್ ಕಾಮತ್, ಪ್ರಭಾರ ಉಪನಿರ್ದೇಶಕರು ಶಿಕ್ಷಣ ಇಲಾಖೆ.