ಕಾವೇರಿ ನದಿಗೆ 1.70 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನುಗ್ಗಿದ ನೀರು

KannadaprabhaNewsNetwork |  
Published : Aug 02, 2024, 12:45 AM IST
1ಕೆಎಂಎನ್ ಡಿ25,26,27,28 | Kannada Prabha

ಸಾರಾಂಶ

ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿ ಉತ್ತಮ ಮಳೆಯಾಗಿ ಹಾರಂಗಿ, ಹೇಮಾವತಿ, ಕೆಆರ್‌ಎಸ್‌ ಅಣೆಕಟ್ಟೆಗಳು ಭರ್ತಿಯಾಗಿದ್ದು, ಅಣೆಕಟ್ಟೆಗಳಿಂದ ಅಧಿಕ ಪ್ರಮಾಣದಲ್ಲಿ ಹೊರ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ಪಕ್ಕದಲ್ಲಿರುವ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನೀರು ಹರಿದು ಬಂದಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೃಷ್ಣರಾಜಸಾಗರ ಜಲಾಶಯದಿಂದ 1.70 ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ತಕ್ಕು ಪ್ರದೇಶಗಳು ಜಲಾವೃತಗೊಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾದರು.

ಕಾವೇರಿ ನದಿ ನೀರು ಗ್ರಾಮದ ಅಂಗನವಾಡಿ ಕೇಂದ್ರದ ಆವರಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬೀದಿಗಳಿಗೆ ನುಗ್ಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಿಸಿತು. ಗ್ರಾಮದ ಬೀದಿಗಳಿಗೆ ನದಿ ನೀರು ನುಗ್ಗಿರುವುದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ನೀರಿನ ಮಧ್ಯೆಯೇ ಆತಂಕದಲ್ಲಿ ಓಡಾಡುವ ಸ್ಥಿತಿ ಎದುರಾಗಿದೆ.

ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿ ಉತ್ತಮ ಮಳೆಯಾಗಿ ಹಾರಂಗಿ, ಹೇಮಾವತಿ, ಕೆಆರ್‌ಎಸ್‌ ಅಣೆಕಟ್ಟೆಗಳು ಭರ್ತಿಯಾಗಿದ್ದು, ಅಣೆಕಟ್ಟೆಗಳಿಂದ ಅಧಿಕ ಪ್ರಮಾಣದಲ್ಲಿ ಹೊರ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ಪಕ್ಕದಲ್ಲಿರುವ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನೀರು ಹರಿದು ಬಂದಿದೆ. ಒಂದು ವೇಳೆ ಕೆಆರ್‌ಎಸ್‌ನಿಂದ 2 ಲಕ್ಷ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಟ್ಟರೆ ಗ್ರಾಮದ ಮನೆಗಳು, ಬೀದಿಗಳು ಜಲಾವೃತಗೊಳ್ಳುವುದು ಖಚಿತ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ತಡೆಗೋಡೆಯನ್ನು ಗ್ರಾಮದ ಕೊನೆ ಭಾಗದವರೆಗೂ ನಿರ್ಮಿಸಿ ನೀರು ಮುಂದಕ್ಕೆ ಹೋಗುವಂತೆ ಕ್ರಮವಹಿಸಿದ್ದರೆ ನೀರು ಗ್ರಾಮಕ್ಕೆ ಬರುತ್ತಿರಲಿಲ್ಲ. ತಡೆಗೋಡೆಯನ್ನು ಗ್ರಾಮದ ವರೆಗೆ ನಿರ್ಮಿಸದೆ ಕೊನೆಯ ಭಾಗದಲ್ಲಿ ಸ್ವಲ್ಪಬಿಟ್ಟಿರುವುದರಿಂದ ನದಿ ನೀರು ಆ ಖಾಲಿ ಜಾಗದ ಮೂಲಕ ಗ್ರಾಮದ ಒಳಗಡೆ ನುಗ್ಗುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಡೀಸಿ, ಸಿಇಒ, ಎಸ್ಪಿ, ತಹಸೀಲ್ದಾರ್ ಭೇಟಿ:

ತಾಲೂಕಿನ ಎಣ್ಣೆಹೊಳ್ಳೆಕೊಪ್ಪಲು ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವಿರ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಸಂತೋಷ್ ಸೇರಿದ ಹಲವು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ನದಿ ನೀರು ನುಗ್ಗಿರುವ ಅಂಗನವಾಡಿ, ಬೀದಿಗಳು, ಕುಡಿಯುವ ನೀರಿನ ಘಟಕಗಳ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದರು. ನಂತರ ನದಿ ತೀರಕ್ಕೆ ಸಾರ್ವಜನಿಕರು, ಮಕ್ಕಳು ಹೋಗದಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದರು.

ಕಾವೇರಿ ನದಿಯಿಂದ 1.70 ಲಕ್ಷ ಕ್ಯುಸೆಕ್ ನೀರು ಬಿಟ್ಟ ನಂತರ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನೀರು ನುಗ್ಗಿರುವ ವಿಷಯ ನನಗೆ ತಿಳಿಯಿತು. ತಕ್ಷಣ ತಾಲೂಕು ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳುಹಿಸಿ ಅಗತ್ಯ ಕ್ರಮ ವಹಿಸಲು ಸೂಚಿಸಿದ್ದೆ ಎಂದರು.

ಗ್ರಾಮಸ್ಥರು ಹೇಳಿರುವಂತೆ ಕಾವೇರಿ ನದಿಗೆ ಉಳಿದ ಭಾಗ ತಡೆಗೋಡೆ ನಿರ್ಮಾಣ ಕುರಿತಂತೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ಡೀಸಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!