ಹೊಲದ ಬದು ನಿರ್ಮಿಸಲು ₹1.74 ಕೋಟಿಯ ಕಾಮಗಾರಿ: ಕೆ.ಎಸ್. ಪೂಜಾರ

KannadaprabhaNewsNetwork | Published : Apr 3, 2025 12:32 AM

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ರೈತರ ಜಮೀನಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಕಾಮಗಾರಿ ಮಾಹಿತಿ ನೀಡಿದರು.

ಗದಗ: ಕೂಲಿ ಕಾರ್ಮಿಕರಿಗೆ ಬೇಸಿಗೆಯ ಸಮಯದಲ್ಲಿ ಉದ್ಯೋಗ ನೀಡುವ ದೃಷ್ಟಿಯಿಂದ ಸರ್ಕಾರ ನರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಲು ₹1.74 ಕೋಟಿ ಕ್ರಿಯಾ ಯೋಜನೆಯ ಕಾಮಗಾರಿಯನ್ನು ಆರಂಭಿಸಿದ್ದು, ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ರೈತರ ಜಮೀನಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಮ್ಮಿಕೊಂಡ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಉದ್ಯೋಗ ಖಾತ್ರಿ ಆರಂಭದ ವರ್ಷದಲ್ಲಿ ₹84 ಇದ್ದ ಕೂಲಿ ಮೊತ್ತ ಪ್ರಸ್ತುತ ₹370 ವರೆಗೂ ಸರ್ಕಾರ ನೀಡುತ್ತಿದ್ದು, ನಗರ ಪ್ರದೇಶಗಳಿಗೆ ಗುಳೆ ಹೋಗದೇ ಗ್ರಾಮದಲ್ಲಿಯೇ ರೈತರ ಜಮೀನಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ನರೇಗಾ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ತಾಪಂ ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ತಂತ್ರಾಂಶದಲ್ಲಿ ಎನ್‌ಎಂಎಂಎಸ್‌ ಹಾಜರಾತಿ ಕಡ್ಡಾಯವಾಗಿದ್ದು, ಕೆಲಸ ಆರಂಭದಲ್ಲಿ ಮತ್ತು ಮುಕ್ತಾಯದ ಹಂತದಲ್ಲಿ ಹಾಜರಾತಿಯನ್ನು ತಂತ್ರಾಂಶದಲ್ಲಿ ಅಳವಡಿಸಬೇಕು. ಇದರಿಂದ ಕಾರ್ಮಿಕರ ಖಾತೆಗೆ ಹಣ ಜಮೆ ಆಗುತ್ತದೆ. ಕಾಯಕ ಬಂಧುಗಳು ಕಾಳಜಿ ವಹಿಸಬೇಕು ಎಂದರು.

ಅಭಿವೃದ್ಧಿ ಅಧಿಕಾರಿ ಅಮೀರನಾಯಕ ಮಾತನಾಡಿ, ಕೃಷಿ ಜಮೀನುಗಳಲ್ಲಿ ನರೇಗಾ ಕಾಮಗಾರಿ ಆರಂಭವಾಗಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಉದ್ಯೋಗ ಖಾತ್ರಿಯಿಂದ ದುಡಿಯುವ ಕೈಗಳಿಗೆ ಕೆಲಸ ನೀಡಿದ ತೃಪ್ತಿ ಗ್ರಾಮ ಪಂಚಾಯಿತಿಗೆ ಇದೆ. ಆರಂಭದ ದಿನವೇ 1040 ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದು ಸಂತಸ ತಂದಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾಪಂ ಸದಸ್ಯರಾದ ಬಸವರಾಜ ಹಟ್ಟಿ, ಲಕ್ಷ್ಮಣ ಗುಡಸಲಮನಿ, ಕುಬೇರಪ್ಪ ಬೆಂತೂರ, ವಿರೂಪಾಕ್ಷಿ ಬೆಟಗೇರಿ, ಹನುಮಂತಪ್ಪ ಬಂಗಾರಿ, ವೀರೇಶ ಪಟ್ಟಣಶೆಟ್ಟಿ, ಅಜಯ, ಅಕ್ಕಮ್ಮ ವಡ್ಡರ, ಶೇಖಪ್ಪ ಸೋಮನಕಟ್ಟಿ ಹಾಜರಿದ್ದರು.

Share this article