ಶಿವಕುಮಾರ ಕುಷ್ಟಗಿ
ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರ ವಿಶೇಷ ಆಸಕ್ತಿಯಿಂದಾಗಿ ಸರ್ಕಾರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಈ ಪವಿತ್ರ ಸ್ಮಾರಕದ ಸಂರಕ್ಷಣೆಗೆ ₹1.85 ಕೋಟಿ ಯೋಜನೆಯನ್ನು ರೂಪಿಸಿದೆ. ನಗರದ ನರಿಬಾವಿ ಓಣಿಯಲ್ಲಿನ ರಾಮೇಶ್ವರ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿರುವ ಈ ದೇವಾಲಯವು ಕಾಲದ ಹೊಡೆತಕ್ಕೆ ಸಿಲುಕಿ ಸ್ವಲ್ಪ ಶಿಥಿಲಗೊಂಡಿದೆ. ಇದನ್ನು ವೈಜ್ಞಾನಿಕವಾಗಿ ಮತ್ತು ಪುರಾತನ ಶೈಲಿಯಲ್ಲೇ ಉಳಿಸಿಕೊಳ್ಳುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಯೋಜನೆಯಲ್ಲಿ ಏನೇನಿರಲಿದೆ?: ಇಲ್ಲಿ ನಡೆಯುತ್ತಿರುವುದು ಅತ್ಯಂತ ಜಾಗರೂಕತೆಯ ಸಂರಕ್ಷಣಾ ಕಾರ್ಯ ಮಾಡುವುದು, ವೈಜ್ಞಾನಿಕವಾಗಿ ಉತ್ಖನನ ಮಾದರಿಯಲ್ಲಿಯೇ ದೇವಸ್ಥಾನದ ಮೇಲೆ ಬೆಳೆದಿರುವ ಗಿಡ- ಗಂಟಿಗಳನ್ನು ತೆರವುಗೊಳಿಸುವುದು, ದೇವಾಲಯದ ನವರಂಗ ಮತ್ತು ಗೋಪುರ ಸೇರಿದಂತೆ ವಿವಿಧೆಡೆ ಬಿಚ್ಚಿ ಹೋಗಿರುವ ಕಲ್ಲುಗಳನ್ನು ಮರು ಜೋಡಣೆ ಮಾಡುವುದು, ಅವಶ್ಯವಿದ್ದಲ್ಲಿ ಮಾತ್ರ ಹೊಸ ಕಲ್ಲು ಜೋಡಣೆ, ದೇವಾಲಯದ ಮೇಲ್ಭಾಗದಲ್ಲಿ ನೀರು ನಿಲ್ಲದಂತೆ ಜಲನಿರೋಧಕ ವ್ಯವಸ್ಥೆ, ಸುತ್ತಲೂ ಸುಂದರ ಕಾಂಪೌಂಡ್ ಮತ್ತು ಪೆವಿಂಗ್ ಕೆಲಸ ಮಾಡಿ, ಪ್ರವಾಸಿಗರಿಗೆ ಸೂಕ್ತ ಮಾಹಿತಿ ಮತ್ತು ದೇವಸ್ಥಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ದೇವಸ್ಥಾನದ ಮುಂಭಾಗದಲ್ಲಿ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಅನುಕೂಲವಾಗುವಂತೆ ಆಕರ್ಷಕ ನಾಮಫಲಕ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸುವುದನ್ನು ಯೋಜನೆಯಲ್ಲಿದೆ.ಈ ರಾಮೇಶ್ವರ ದೇವಸ್ಥಾನದ ಅವ್ಯವಸ್ಥೆಯ ಕುರಿತು ಕನ್ನಡಪ್ರಭ 2025ರ ಆ. 30ರಂದು ನಿರ್ಲಕ್ಷ್ಯಕ್ಕೆ ಒಳಗಾದ ರಾಮೇಶ್ವರ ದೇವಸ್ಥಾನ ಎಂಬ ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ದೇವಾಲಯ ಜೀರ್ಣೋದ್ಧಾರದ ಭರವಸೆ ನೀಡಿದ್ದರು. ಈಗ ಅದು ಸಾಕಾರಗೊಳ್ಳುತ್ತಿದೆ.ಮುಖ ಪ್ರವಾಸಿ ತಾಣ: ನಮ್ಮ ಹಿರಿಯರು ನೀಡಿದ ಈ ವಾಸ್ತುಶಿಲ್ಪದ ಆಸ್ತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ಸಂರಕ್ಷಣಾ ಕಾರ್ಯ ಮುಗಿದ ನಂತರ ರಾಮೇಶ್ವರ ದೇವಾಲಯ ಗದುಗಿನಲ್ಲಿ ಈಗಾಗಲೇ ಇರುವ ವೀರನಾರಾಯಣ, ಸೋಮೇಶ್ವರ ದೇವಸ್ಥಾನಗಳ ಸಾಲಿನಲ್ಲಿಯೇ ಗುರುತಿಸುವಂತಾಗಲಿದೆ ಹಾಗೂ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಮಿನುಗಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.