ಪ್ರಪಂಚಾದ್ಯಂತ 1 ಬಿಲಿಯನ್ ಜನರಿಗೆ ಬಿ.ಪಿ. ಕಾಯಿಲೆ

KannadaprabhaNewsNetwork |  
Published : Oct 25, 2024, 12:55 AM IST
ಕ್ಯಾಪ್ಷನಃ24ಕೆಡಿವಿಜಿ37ಃ ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಕೇಂದ್ರದಲ್ಲಿ ಡಾ.ಬಿ.ಎಂ.ವಿಶ್ವನಾಥ ಬಿ.ಪಿ.ಕಾಯಿಲೆ ಕುರಿತು ಮಾಹಿತಿ ನೀಡಿದರು. | Kannada Prabha

ಸಾರಾಂಶ

ಭಾರತವೂ ಸೇರಿದಂತೆ ಪ್ರಪಂಚಾದ್ಯಂತ ತುಂಬಾ ಪ್ರಚಲಿತವಾಗಿರುವ ಆಧುನಿಕ ಕಾಯಿಲೆಯೆಂದರೆ ಬಿ.ಪಿ. ಅಥವಾ ಅಧಿಕ ರಕ್ತದೊತ್ತಡ. ಸದ್ಯಕ್ಕೆ ನಮ್ಮ ದೇಶದಲ್ಲಿ 10 ರಿಂದ 30% ಜನರಿಗೆ ಈ ಖಾಯಿಲೆ ಇದೆ ಎಂದು ಅಧ್ಯಯನಗಳು ಹೇಳುತ್ತವೆ. ಪ್ರಪಂಚಾದ್ಯಂತ 1 ಬಿಲಿಯನ್ ಜನರಿಗೆ ಬಿ.ಪಿ.ಕಾಯಿಲೆ ಇದೆ. ಹಾಗೂ ಮುಂದಿನ 5 ರಿಂದ 10 ವರ್ಷಗಳಲ್ಲಿ 1.5 ಬಿಲಿಯನ್ ಜನರಿಗೆ ಈ ಕಾಯಿಲೆ ಬರಬಹುದು ಎಂದು ಅಂದಾಜಿದೆ ಎಂದು ಜೆಜೆಎಂಎಂಸಿಯ ನಿವೃತ್ತ ಪ್ರಾಧ್ಯಾಪಕ, ತಜ್ಞ ವೈದ್ಯ ಡಾ. ಬಿ.ಎಂ.ವಿಶ್ವನಾಥ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆಭಾರತವೂ ಸೇರಿದಂತೆ ಪ್ರಪಂಚಾದ್ಯಂತ ತುಂಬಾ ಪ್ರಚಲಿತವಾಗಿರುವ ಆಧುನಿಕ ಕಾಯಿಲೆಯೆಂದರೆ ಬಿ.ಪಿ. ಅಥವಾ ಅಧಿಕ ರಕ್ತದೊತ್ತಡ. ಸದ್ಯಕ್ಕೆ ನಮ್ಮ ದೇಶದಲ್ಲಿ 10 ರಿಂದ 30% ಜನರಿಗೆ ಈ ಖಾಯಿಲೆ ಇದೆ ಎಂದು ಅಧ್ಯಯನಗಳು ಹೇಳುತ್ತವೆ. ಪ್ರಪಂಚಾದ್ಯಂತ 1 ಬಿಲಿಯನ್ ಜನರಿಗೆ ಬಿ.ಪಿ.ಕಾಯಿಲೆ ಇದೆ. ಹಾಗೂ ಮುಂದಿನ 5 ರಿಂದ 10 ವರ್ಷಗಳಲ್ಲಿ 1.5 ಬಿಲಿಯನ್ ಜನರಿಗೆ ಈ ಕಾಯಿಲೆ ಬರಬಹುದು ಎಂದು ಅಂದಾಜಿದೆ ಎಂದು ಜೆಜೆಎಂಎಂಸಿಯ ನಿವೃತ್ತ ಪ್ರಾಧ್ಯಾಪಕ, ತಜ್ಞ ವೈದ್ಯ ಡಾ. ಬಿ.ಎಂ.ವಿಶ್ವನಾಥ ಹೇಳಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಅಧಿಕ ರಕ್ತದೊತ್ತಡ (ಬಿ.ಪಿ.ಕಾಯಿಲೆ) ಕಾರಣ, ಚಿಕಿತ್ಸೆ ಹಾಗೂ ಪರಿಹಾರ ಕುರಿತು ಉಪನ್ಯಾಸ ನೀಡಿದರು. ಅಧಿಕ ರಕ್ತದೊತ್ತಡ ಎಂದರೆ ಸರಳವಾಗಿ ಹೇಳಬೇಕೆಂದರೆ ನಮ್ಮ ಹೃದಯ ನಿಮಿಷಕ್ಕೆ 70 ರಿಂದ 80 ಬಾರಿ ಬಡಿದುಕೊಳ್ಳುತ್ತದೆ. ಪ್ರತಿಯೊಂದು ಬಡಿತದಲ್ಲಿ ಹೃದಯ ಹಿಗ್ಗುತ್ತದೆ ಮತ್ತು ಕುಗ್ಗುತ್ತದೆ. ಅಂದರೆ ಸಂಕುಚಿತಗೊಳ್ಳುತ್ತದೆ. ಹಿಗ್ಗಿದಾಗ ಹೃದಯಕ್ಕೆ ರಕ್ತ ಬಂದು ಸೇರುತ್ತದೆ ಮತ್ತು ಸಂಕುಚಿತಗೊಂಡಾಗ ರಕ್ತ ಹೃದಯದಿಂದ ರಕ್ತನಾಳಗಳ ಮೂಲಕ ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕ ಒದಗಿಸುತ್ತದೆ. (ಆಮ್ಲಜನಕ ರಕ್ತದ ಹಿಮೋಗ್ಲೋಬಿನ್‌ನಲ್ಲಿ ಇರುತ್ತದೆ). ರಕ್ತನಾಳಗಳಲ್ಲಿ ರಕ್ತ ಹರಿಯುವಾಗ ರಕ್ತನಾಳಗಳ ಗೋಡೆಗಳ ಮೇಲೆ ಬೀಳುವ ಒತ್ತಡಕ್ಕೆ ರಕ್ತದ ಒತ್ತಡವೆಂದು ಕರೆಯುತ್ತೇವೆ ಎಂದರು. ಈ ಒತ್ತಡ ಸಾಮಾನ್ಯವಾಗಿ ಹೃದಯ ಸಂಕುಚಿತಗೊಂಡಾಗ 120 ಮಿಮೀ ಆಫ್ ಮರ್ಕ್ಯರಿ ಆಸುಪಾಸಿನಲ್ಲಿರುತ್ತದೆ. ಇದನ್ನು ಸಿಸ್ಟೋಲಿಕ್ ಬಿ.ಪಿ. ಎನ್ನುತ್ತಾರೆ. ಹೃದಯ ಹಿಗ್ಗಿದಾಗ ರಕ್ತದ ಒತ್ತಡ 80 ಎಂಎಂಆಫ್ ಎಚ್‌ಜಿ ಆಸುಪಾಸಿನಲ್ಲಿರುತ್ತದೆ. ಇದನ್ನು ಡಯಸ್ಟೋಲಿಕ್ ಬಿ.ಪಿ. ಎಂದು ಕರೆಯುತ್ತಾರೆ. ರಕ್ತದ ಒತ್ತಡವನ್ನು ಬಿ.ಪಿ. ಮಾಪಕದಿಂದ ಅಳೆದು ಒತ್ತಡ ಎಷ್ಟಿದೆ ಎಂದು ತಿಳಿದುಕೊಳ್ಳಬಹುದು. ಆರೋಗ್ಯವಂತ ವ್ಯಕ್ತಿಗಳಲ್ಲಿ ರಕ್ತದ ಒತ್ತಡ 120/80 ಎಂಎಂ ಆಫ್ ಎಚ್‌ಜಿ ಆಸುಪಾಸಿನಲ್ಲಿರುತ್ತದೆ. ರಕ್ತದ ಒತ್ತಡ 140/90 ಎಂಎಂ ಆಫ್ ಎಚ್‌ಜಿ ಗಿಂತ ಜಾಸ್ತಿ ಇದ್ದರೆ ಅಧಿಕ ರಕ್ತದೊತ್ತಡವೆಂದು ಗುರುತಿಸುತ್ತೇವೆ ಎಂದು ತಿಳಿಸಿದರು.ಬಿ.ಪಿ. ಕಾಯಿಲೆ ಇದೆಯೇ ಎಂದು ಧೃಡಪಡಿಸಲು ಹಲವಾರು ಬಾರಿ ಬಿ.ಪಿ.ಯನ್ನು ಪರೀಕ್ಷಿಸಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯ ವಯಸ್ಸನ್ನು ಮಾನಸಿಕ ಮತ್ತು ದೈಹಿಕ ಚಟುವಟಿಕೆ ಹಾಗೂ ಕೆಲವು ಹಾರ್ಮೋನ್ ಗಳು ರಕ್ತದೊತ್ತಡದ ಮೇಲೂ ಪರಿಣಾಮ ಬೀರುವುದರಿಂದ ರಕ್ತದ ಒತ್ತಡ ಏರುಪೇರಾಗುತ್ತಿರುತ್ತದೆ ಎಂದು ಮಾಹಿತಿ ನೀಡಿದರು. ಪ್ರೈಮರಿ ವಿಧದ ಬಿ.ಪಿ. ಖಾಯಿಲೆಗೆ ಆಧುನಿಕ ಶೈಲಿ (ಉಪ್ಪು ಮತ್ತು ಕೊಬ್ಬು ಹೆಚ್ಚಿರುವ ಆಹಾರ), ದೈಹಿಕ ಶ್ರಮದ ಕೊರತೆ, ಬೊಜ್ಜು, ಮಾನಸಿಕ ಒತ್ತಡ, ದುರಾಭ್ಯಾಸಗಳು (ಧೂಮಪಾನ, ಮಧ್ಯ, ಮಾದಕ ವಸ್ತುಗಳ ಸೇವನೆ) ಮತ್ತು ಅನುವಂಶಿಕತೆ (ರಕ್ತ ಸಂಬಂಧಿಗಳಲ್ಲಿ ಬಿ.ಪಿ. ಕಾಯಿಲೆ ಇರುವುದು) ಅಧಿಕ ರಕ್ತದೊತ್ತಡ ಬರಲು ಪ್ರಮುಖ ಪಾತ್ರವಹಿಸುತ್ತದೆ. ಉತ್ತಮ ಜೀವನ ಶೈಲಿಯಿಂದ ಬಿ.ಪಿ. ಇದ್ದರೆ ಕಡಿಮೆ ಪ್ರಮಾಣದ ಮಾತ್ರೆಗಳಿಂದ ಹತೋಟಿಗೆ ತರಬಹುದು.ಬಿ.ಪಿ. ಕಾಯಿಲೆಯ ಚಿಕಿತ್ಸೆ:ಚಿಕಿತ್ಸೆಯ ಮೊದಲ ಹಂತ ಜೀವನ ಶೈಲಿಯಲ್ಲಿ ಬದಲಾವಣೆ ತರುವುದು. ದೈಹಿಕ ವ್ಯಾಯಮಗಳಾದ ನಡಿಗೆ, ಯೋಗ, ಆಟಗಳಲ್ಲಿ ಭಾಗವಹಿಸುವುದು. ಈಜು, ಮುಂತಾದ ಚಟುವಟಿಕೆಗಳಲ್ಲಿ ತೊಡಗುವುದು. ಆಹಾರದಲ್ಲಿ ಉಪ್ಪಿನ ಅಂಶ ಕಡಿಮೆ ಮಾಡಿಕೊಳ್ಳಬೇಕು. ಉಪ್ಪು ಹೆಚ್ಚಿಗೆ ಇರುವ ಆಹಾರಗಳನ್ನು ಮಿತಿಗೊಳಿಸುವುದು, ಕೊಬ್ಬಿನ ಅಂಶ ಕಡಿಮೆ ಮಾಡಿಕೊಳ್ಳಲು ಅತಿಯಾದ ಕರಿದ ಪದಾರ್ಥಗಳ ಸೇವನೆ ಮತ್ತು ಜಿಡ್ಡನ ಪದಾರ್ಥಗಳನ್ನು ಮಿತಿಗೊಳಿಸ ಬೇಕಾಗುತ್ತದೆ ಎಂದು ತಿಳಿಸಿದರು.

ಹಸಿರು ತರಕಾರಿ, ಹಾಗೂ ಹಣ್ಣುಗಳಲ್ಲಿ ಪೊಟ್ಯಾಸಿಯಂ ಮತ್ತು ನಾರಿನ ಅಂಶ ಹೆಚ್ಚಿರುವುದರಿಂದ ಬಿ.ಪಿ. ಕಾಯಿಲೆ ಹತೋಟಿಗೆ ಸಹಾಯ ಮಾಡುತ್ತದೆ. ತೂಕ ಹೆಚ್ಚಿದ್ದರೆ ಕಡಿಮೆ ಮಾಡಿಕೊಳ್ಳಬೇಕು ಮತ್ತು ದುರಾಭ್ಯಾಸಗಳಿಂದ ದೂರವಿರಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ, ಧ್ಯಾನ, ನಗೆ ಕೂಟಗಳಲ್ಲಿ ಭಾಗವಹಿಸುವುದು ಆಗಾಗ ಪ್ರವಾಸ ಕೈಗೊಳ್ಳುವುದನ್ನು ಮಾಡಬಹುದು ಎಂದು ಮಾಹಿತಿ ನೀಡಿದರು. ಔಷಧಿಗಳ ಸೇವನೆ: ನಿಯಮಿತವಾಗಿ ಪ್ರತಿದಿನ ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಳಬೇಕು. ಆಗಾಗ ಅಂದರೆ ತಿಂಗಳಿಗೆ ಎರಡು ಅಥವಾ ಮೂರು ಬಾರಿ ಬಿ.ಪಿ.ಪರೀಕ್ಷೆ ಮಾಡಿಕೊಳ್ಳಬೇಕು. ಇದ್ದಕ್ಕಿದ್ದಂತೆ ಬಿ.ಪಿ ಮಾತ್ರೆ ನಿಲ್ಲಿಸುವುದು ಅಪಾಯಕರ. ಮಾತ್ರೆ ಕಡಿಮೆ ಮಾಡುವ ಅವಕಾಶ ಇದ್ದಲ್ಲಿ ವೈದ್ಯರು ನಿಧಾನವಾಗಿ ಕಡಿಮೆಗೊಳಿಸುತ್ತಾರೆ.ವರ್ಷಕ್ಕೆ ಒಂದು ಅಥವಾ ಎರಡು ಬಾರಿ ರಕ್ತ, ಮಾತ್ರೆ, ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಮೂತ್ರಪಿಂಡ, ಹೃದಯದ ಕಾಯಿಲೆ, ಕೊಲೆಸ್ಟಾರಾಲ್ ಮತ್ತು ಥೈರಾಯ್ಡ್ ಕಾಯಿಲೆ ಇದ್ದರೆ ಗುರುತಿಸಬಹುದು ಮತ್ತು ಅವುಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. ಅಲ್ಲದೆ ಈ ಪರೀಕ್ಷೆಗಳಿಂದ ಔಷಧಿಗಳ ದುಷ್ಪರಿಣಾಮಗಳನ್ನು ಸಹ ಗುರುತಿಸಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಸುರೇಶ್ ಬಾಬು, ಡಾ. ರೇವಪ್ಪ, ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ