1 ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಅಭಿವೃದ್ಧಿ: ಪಿ.ರವಿಕುಮಾರ್‌

KannadaprabhaNewsNetwork |  
Published : Apr 08, 2026, 01:45 AM IST
7ಕೆಎಂಎನ್ ಡಿ11, 12 | Kannada Prabha

ಸಾರಾಂಶ

ಮಹಿಳಾ ಸರ್ಕಾರಿ ಕಾಲೇಜಿನ ಕಾಂಪೌಂಡ್ ಶಿಥಿಲಗೊಂಡಿದೆ. ದುರಸ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲೇಜಿನ ಹೆಬ್ಬಾಗಿಲನ್ನು ಈ ವರ್ಷವೇ ನಿರ್ಮಾಣ ಮಾಡಲಾಗುವುದು. ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 3 ಲಕ್ಷ ರು.ಗಳನ್ನು ಹಿಂದಿನಂತೆ ಈ ವರ್ಷವೂ ನೀಡುತ್ತೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳಾ ಕಾಲೇಜಿನಲ್ಲಿ ಹವಾ ನಿಯಂತ್ರಿಕ ಕೊಠಡಿ ಒಳಗೊಂಡ ಲೇಡಿಸ್ ಲಾಂಜ್ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಮುಂದಿನ 10 ದಿನಗಳಲ್ಲಿ 1 ಕೋಟಿ ರು. ವೆಚ್ಚದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ವತಿಯಿಂದ ಕಾಲೇಜಿನ ವನರಂಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಜಾನಪದ ಜಾತ್ರೆಗೆ ರಾಶಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಾಲೇಜಿನ ಕಾಂಪೌಂಡ್ ಶಿಥಿಲಗೊಂಡಿದೆ. ದುರಸ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲೇಜಿನ ಹೆಬ್ಬಾಗಿಲನ್ನು ಈ ವರ್ಷವೇ ನಿರ್ಮಾಣ ಮಾಡಲಾಗುವುದು. ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 3 ಲಕ್ಷ ರು.ಗಳನ್ನು ಹಿಂದಿನಂತೆ ಈ ವರ್ಷವೂ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳು ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಓದಿ ಬದುಕಿನಲ್ಲಿ ಮುಂದೆ ಬರಬೇಕು. ಆಗ ಮಾತ್ರ ಕಾಲೇಜಿಗೆ ಒಳ್ಳೆಯ ಹೆಸರು ಬರಲು ಸಾಧ್ಯ. ಏ.30 ರಂದು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ 1 ಲಕ್ಷ ವಿದ್ಯಾರ್ಥಿಗಳು ಒಳಗೊಂಡಂತೆ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು, ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭಾಗವಹಿಸಬೇಕು ಎಂದರು.

ಜಾನಪದ ಗಾಯಕ, ಹರಿಕಥೆ ವಿದ್ವಾನ್ ಉಮೇಶ್ ಶಿವಾರ ಮಾತನಾಡಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಸ್ತುತ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಇದರಿಂದ ಅನಾಹುತಗಳು ಹೆಚ್ಚಾಗುತ್ತಿವೆ. ಅವರಲ್ಲಿ ವಿಶ್ವಾಸ ಮೂಡಿಸಿ ಆತ್ಮಹತ್ಯೆಗಳನ್ನು ತಡೆಯಲು ಆತ್ಮವಿಶ್ವಾಸ ಹೆಚ್ಚಿಸಬೇಕಿದೆ ಎಂದರು.

ನಗು ಜೀವನಕ್ಕೆ ದಿವೌಷಧಿ, ವಯೋವೃದ್ಧತೆ ತಡೆಯುತ್ತದೆ, ಹೆಚ್ಚು ನಗಾಡಿ, ಅತಿಯಾಗಿ ನಗಬೇಡಿ ಅದು ಅಪಾರ್ಥವಾಗುತ್ತದೆ. ಜನಪದ ಹಾಡು ಕೇಳಿ, ಜಾತ್ರೆಯಲ್ಲಿ ತಾಪತ್ರೆಗಳನ್ನು ಮರೆಯಿರಿ. ಆನಂದಮಯದಿಂದ ಅನಂತ ಸುಖವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಕ್ರೀಡಾಂಗಣದಿಂದ ಜಾನಪದ ಕಲಾತಂಡಗಳೊಂದಿಗೆ ಎತ್ತಿನಗಾಡಿಯಲ್ಲಿ ಶಾಸಕ ಮತ್ತು ಅತಿಥಿಗಳನ್ನು ತಮಟೆ ನಗಾರಿ, ಬೊಂಬೆ ಕುಣಿತ ಮೇಳದ ಮೆರವಣಿಗೆಯಲ್ಲಿ ವೇದಿಕೆಗೆ ಕರೆದೊಯ್ಯಲಾಯಿತು. ವಿದ್ಯಾರ್ಥಿನಿಯರು ತಂದಿದ್ದ ದೇಸಿ ತಿನಿಸುಗಳು ಮತ್ತು ತೊಟ್ಟಿದ್ದ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಗಮನ ಎಳೆಯಿತು. ಗ್ರಾಮೀಣ ಸೊಗಡಿನಲ್ಲಿ ನಿರೂಪಣೆ ಮೆಚ್ಚುಗೆ ಪಡೆಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಕೆ.ಗುರುರಾಜ್ ಪ್ರಭು, ಕಾಲೇಜಿನ ಸಿಬ್ಬಂದಿ ದಾನೇಗೌಡ, ಗುಲ್ಲೇ ಆರಿಫ್, ಕೆ.ಪಿ.ರವಿಕಿರಣ್, ಡಾ.ಗುಲೇ ಆರಿಫಾ, ಎಸ್.ಪಿ.ಹೇಮಲತಾ, ಅನುಶ್ರೀ, ಎಸ್.ಕೌಶಲ್ಯ, ಶಿವರಾಜು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ.15 ರಂದು ಆದಿಚುಂಚನಗಿರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಮದ್ದೂರು ಪ್ರತಿಭಟನಾ ಧರಣಿ ರಾಜಕೀಯ ಪ್ರೇರಿತ: ಶಾಸಕ ಕೆ.ಎಂ.ಉದಯ್