ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್‌ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ.
ನವದೆಹಲಿ: ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್‌ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ. ಇದರಿಂದ ಮಹತ್ವದ ಯೋಜನೆಗಳಿಗೆ ಹಿನ್ನಡೆ ಆಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜೀನಾಮೆ/ವಿಆರ್‌ಎಸ್ ನಿಯಮ ಬಿಗಿಗೊಳಿಸಿದೆ.
ಇಸ್ರೋಗೆ ಪ್ರತಿಭಾ ಪಲಾಯನ ಹೊಸ ವಿಚಾರವೇನಲ್ಲ. ಆದರೆ, ರಾಷ್ಟ್ರೀಯ ಮಹತ್ವದ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ಹಾಗೂ ಅನುಭವಿ ತಜ್ಞರ ರಾಜೀನಾಮೆ ಆ ಯೋಜನೆಗಳಿಗೆ ಹಿನ್ನಡೆ ಸೃಷ್ಟಿಸುತ್ತಿದೆ. ಅವರ ಜಾಗಕ್ಕೆ ತಕ್ಷಣ ಬದಲಿ ವ್ಯವಸ್ಥೆ ಮಾಡುವುದು ಅಷ್ಟು ಸುಲಭವೂ ಅಲ್ಲ. ಹೀಗಾಗಿ ಇಸ್ರೋಗೆ ಈಗ ದಿಢೀರ್ ಪ್ರತಿಭಾ ಪಲಾಯನದಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ವರದಿಯಾಗಿದೆ.
ಏಕೆ ರಾಜೀನಾಮೆ?:
ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ. ಹಲವು ಸ್ಟಾರ್ಟಪ್‌ಗಳು ಮತ್ತು ಖಾಸಗಿ ಕಂಪನಿಗಳು ಇಸ್ರೋದ ಅನುಭವಿ ವಿಜ್ಞಾನಿಗಳು ಹಾಗೂ ತಂತ್ರಜ್ಞರನ್ನು ಸೆಳೆಯಲು ಹೆಚ್ಚಿನ ಒಲವು ತೋರುತ್ತಿವೆ. ಜತೆಗೆ, ನಾಯಕತ್ವ, ಆಡಳಿತಾತ್ಮಕ ವಿಚಾರಗಳು, ಉದ್ಯೋಗದಲ್ಲಿನ ಬೆಳವಣಿಗೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿಯೂ ಹಲವು ವಿಜ್ಞಾನಿಗಳು, ತಂತ್ರಜ್ಞರು ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಾಜೀನಾಮೆಗೆ ಕಡಿವಾಣ:
ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಬಾಹ್ಯಾಕಾಶ ಇಲಾಖೆಯು ಜು.14ರಂದು ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಗಗನಯಾನ ಮತ್ತು ಇತರೆ ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ಯೋಜನೆಗಳ ಭಾಗವಾಗಿರುವ ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರ ರಾಜೀನಾಮೆ ಮತ್ತು ವಿಆರ್‌ಎಸ್ ಕುರಿತ ನಿಯಮಾವಳಿಗಳನ್ನು ಬಿಗಿಗೊಳಿಸಿದೆ.
ಈ ಹಿಂದೆ ವಿಜ್ಞಾನಿಗಳ ರಾಜೀನಾಮೆ ಮತ್ತು ವಿಆರ್‌ಎಸ್ ಕುರಿತ ಮನವಿಗೆ ಇಸ್ರೋ ನಿರ್ದೇಶಕರು ಅನುಮತಿ ನೀಡುತ್ತಿದ್ದರು. ಆದರೆ, ಪರಿಷ್ಕೃತ ನಿಯಮಾವಳಿ ಪ್ರಕಾರ ರಾಷ್ಟ್ರೀಯ ಹಿತಾಸಕ್ತಿಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರು ರಾಜೀನಾಮೆ ಅಥವಾ ವಿಆರ್‌ಎಸ್ ಕೋರಿ ಸಲ್ಲಿಸಲಿರುವ ಅರ್ಜಿಗಳನ್ನು ಇನ್ನು ಮುಂದೆ ತೀವ್ರ ಪರಿಶೀಲನೆ ನಡೆಸಲಾಗುತ್ತದೆ. ಅದೇ ರೀತಿ ಇದಕ್ಕೆ ಅಂತಿಮ ಒಪ್ಪಿಗೆಯನ್ನು ಬಾಹ್ಯಾಕಾಶ ಇಲಾಖೆಯೇ ನೀಡುತ್ತದೆ.
ಬರೋದು ಹೋಗೋದು ಮಾಮೂಲಿ: ಸಚಿವ ಸಿಂಗ್
ನವದೆಹಲಿ: ಇಸ್ರೋ ರಾಜೀನಾಮೆ ಪರ್ವದ ಬಗ್ಗೆ ಕೇಂದ್ರ ವಿಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದು ‘ಕೆಲವರು ಆಡಳಿತಾತ್ಮಕ ಕಾರಣಗಳಿಗಾಗಿ ಇಂಥ ನಿರ್ಧಾರ ತೆಗೆದುಕೊಳ್ಳಬಹುದು. ಇಸ್ರೋ ಬಹಳ ದೊಡ್ಡ ಕಾರ್ಯಪಡೆ ಹೊಂದಿದೆ. ಹೋಗುವುದು, ಬರುವುದು ಇರುತ್ತದೆ. ಜನರು ಹೊರಟು ಹೋದಂತೆ ಅನೇಕರು ಸೇರುತ್ತಾರೆ. ಈ ವಿಷಯದಲ್ಲಿ ಯಾವುದೇ ವಿವಾದವಿಲ್ಲ’ ಎಂದರು.
ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ‘ಹೌದು, ಬಹಳಷ್ಟು ಜನರು ಹೋಗುತ್ತಾರೆ. ಅದು ಪ್ರತಿ ಸಂಸ್ಥೆಯಲ್ಲಿನ ವಿದ್ಯಮಾನ. ಆದರೆ ಪ್ರಮುಖ ಯೋಜನೆಗಳು ಹಠಾತ್ತನೆ ತೊಂದರೆ ಅನುಭವಿಸದಂತೆ ನೋಡಿಕೊಳ್ಳುತ್ತಿದ್ದೇವೆ. ಯಾರಾದರೂ ಹೋದರೆ ಅನ್ಯರಿಗೆ ಜವಾಬ್ದಾರಿ ವಹಿಸುತ್ತಿದ್ದೇವೆ’ ಎಂದರು.
ರಾಜೀನಾಮೆ ಪರ್ವ
- ಮಾನವಸಹಿತ ಅಂತರಿಕ್ಷ ಯಾನ ಸೇರಿ ಹಲವು ಕಾರ್ಯಕ್ರಮಕ್ಕೆ ಸಜ್ಜಾಗಿರುವ ಇಸ್ರೋ
- ಇಂತಹ ಹೊತ್ತಿನಲ್ಲೇ 1 ವರ್ಷದಲ್ಲಿ 100ರಿಂದ 120 ವಿಜ್ಞಾನಿಗಳಿಂದ ರಾಜೀನಾಮೆ
- ಇದರಿಂದ ಮಹತ್ವದ ಯೋಜನೆಗಳಿಗೆ ಹಿನ್ನಡೆ. ಕೇಂದ್ರದಿಂದ ರಾಜೀನಾಮೆ ನೀತಿ ಬಿಗಿ
- ವಿಜ್ಞಾನಿಗಳು ಬರ್ತಾರೆ, ಹೋಗ್ತಾರೆ ಎಂದ ಇಸ್ರೋ ಅಧ್ಯಕ್ಷ, ಕೇಂದ್ರ ಸಚಿವ ಜಿತೇಂದ್ರ

