ಗದಗದ ಲಕ್ಕುಂಡಿಯಲ್ಲಿ ನೂರು ದೇವಾಲಯ, ನೂರು ಬಾವಿಗಳ ಹುಡುಕಾಟದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ಸ್ಯಾಟಲೈಟ್‌ ಇಮೇಜಿಂಗ್‌ ತಂತ್ರಜ್ಞಾನ ಬಳಕೆ ಮಾಡುವ ಕುರಿತು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದೆ.

ಬೆಂಗಳೂರು : ಗದಗದ ಲಕ್ಕುಂಡಿಯಲ್ಲಿ ನೂರು ದೇವಾಲಯ, ನೂರು ಬಾವಿಗಳ ಹುಡುಕಾಟದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ಸ್ಯಾಟಲೈಟ್‌ ಇಮೇಜಿಂಗ್‌ ತಂತ್ರಜ್ಞಾನ ಬಳಕೆ ಮಾಡುವ ಕುರಿತು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದೆ.

ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ ನೇತೃತ್ವದಲ್ಲಿ ಬುಧವಾರ ಸ್ಯಾಟಲೈಟ್‌ ಇಮೇಜಿಂಗ್‌ ತಂತ್ರಜ್ಞಾನ ಬಳಕೆ ಕುರಿತು ತಜ್ಞರೊಂದಿಗೆ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್‌ ಅವರು ಲಕ್ಕುಂಡಿಯಲ್ಲಿ ನೂರು ಬಾವಿ, ನೂರು ದೇವಾಲಯಗಳ ಹುಡುಕಾಟ ನಡೆಯುತ್ತಿದೆ. ಬಾವಿ, ದೇವಾಲಯಗಳ ಹುಡುಕಾಟಕ್ಕಾಗಿ ಸ್ಯಾಟಲೈಟ್‌ ತಂತ್ರಜ್ಞಾನ ಬಳಸಲು ಇಸ್ರೋ ತಜ್ಞರೊಂದಿಗೆ ಚರ್ಚಿಸಿದ್ದೇವೆ. ಈಗಾಗಲೇ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ಅವರ ಜತೆಗೂ ಚರ್ಚಿಸಿದ್ದೇವೆ ಎಂದು ಹೇಳಿದರು.

ಪ್ರಸ್ತುತ 38 ದೇವಾಲಯ ಪತ್ತೆ

ಪ್ರಸ್ತುತ 38 ದೇವಾಲಯ ಪತ್ತೆಯಾಗಿದ್ದು, ಇನ್ನೂ 62 ದೇವಾಲಯ ಹುಡುಕಬೇಕಿದೆ. ಇದರ ಸಲುವಾಗಿ ಗಂಭೀರ ಪ್ರಯತ್ನ ಮುಂದುವರೆದಿದೆ. ಗ್ರಾಮಸ್ಥರು ತುಂಬಾ ಸಹಕಾರ ನೀಡುತ್ತಿದ್ದಾರೆ. ಒಟ್ಟಾರೆ ಸರ್ಕಾರವು ಲಕ್ಕುಂಡಿಯಲ್ಲಿನ ಪ್ರಾಚೀನ ವಸ್ತು, ಕಟ್ಟಡ, ದೇವಾಲಯ, ಬಾವಿಗಳ ಸಂರಕ್ಷಣೆಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ದೇವಾಲಯಗಳ ಸ್ವರ್ಗ ಎಂದೇ ಕರೆಯಲ್ಪಡುವ ಲಕ್ಕುಂಡಿಯನ್ನು 100 ಗುಡಿ, 100 ಬಾವಿಗಳ ನಾಡು ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಮನೆ ಪಾಯ ಅಗೆಯುವಾಗ ಚಿನ್ನ ಸಿಕ್ಕಿದ್ದ ಹಿನ್ನೆಲೆಯಲ್ಲಿ ಉತ್ಖನನ ಕಾರ್ಯ ಕೈಗೊಳ್ಳಲಾಗಿದೆ.

ಅಕ್ರಮ ಗಣಿಗಾರಿಕೆ ಬಗ್ಗೆ ಮೌನವಹಿಸಿಲ್ಲ:

ಗಣಿ ಅಕ್ರಮದ ಬಗ್ಗೆ ಸರ್ಕಾರ ಮೌನವಹಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ್‌, ಸರ್ಕಾರ ಮೌನ ವಹಿಸಿಲ್ಲ. ಟಪಾಲ್ ಗಣೇಶ ನನಗೆ ಕರೆ ಮಾಡಿದ್ದರು. ಅವರ ಬಳಿ ವಿವರಗಳಿವೆ ಎಂದು ಹೇಳಿದ್ದರು. ಹೀಗಾಗಿ ವಿವರ ತೆಗೆದುಕೊಂಡು ಬರುವಂತೆ ಕೇಳಿದ್ದೇನೆ ಎಂದಷ್ಟೇ ಹೇಳಿದರು.