ತೋಂದಾರ್ಯ ಶ್ರೀಮಠದ ಸಿದ್ದರಾಮ ಸ್ವಾಮಿಗಳು ಮಾತನಾಡಿ, ಉಭಯ ಶ್ರೀಗಳು ತಮ್ಮ ಬದುಕನ್ನು ಅಂಧ- ಅನಾಥರು, ಬಡವರಿಗಾಗಿ ಸವೆಸಿ ತಮ್ಮ ಜೀವನ ಸಾರ್ಥಕ ಪಡೆದುಕೊಂಡರು. ಅಂತಹ ಮಹಾ ಪುರುಷರನ್ನು ಸಮಾಜವು ಸದಾ ಸ್ಮರಿಸುತ್ತದೆ ಎಂದರು.
ಗದಗ: ಕಣ್ಣು ಇದ್ದವರು ಮಾಡಲಾರದಂತಹ ಕೆಲಸವನ್ನು ಉಭಯ ಶ್ರೀಗಳು ಮಾಡಿದ್ದಾರೆ. ಶಿವನ ಆರಾಧನೆ ಮಾಡಿ ಶಿವಯೋಗಿ ಆದ ಶ್ರೀಗಳು ಸ್ವತಃ ಅಂಧರಾದರೂ ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿ ವಿಭೂತಿ ಪುರುಷರಾಗಿದ್ದಾರೆ ಅವರ ಸ್ಮಾರಕವನ್ನು ಪೂರ್ಣಗೊಳಿಸಲು ರಾಜ್ಯ ಮತ್ತು ಕೇಂದ್ರದಿಂದ ಸಹಕಾರ ನೀಡಲಾಗುವುದೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳ 82ನೇ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿ, ಗದುಗಿನ ಪುಣ್ಯಕ್ಷೇತ್ರದ ಮಣ್ಣಿಗೆ ಭಕ್ತಿಯ ಲೇಪನ ಇದೆ. ಸಂಗೀತ ಪರಂಪರೆ ಹೊಂದಿದ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರ ಇದಾಗಿದೆ ಎಂದರು.ತೋಂದಾರ್ಯ ಶ್ರೀಮಠದ ಸಿದ್ದರಾಮ ಸ್ವಾಮಿಗಳು ಮಾತನಾಡಿ, ಉಭಯ ಶ್ರೀಗಳು ತಮ್ಮ ಬದುಕನ್ನು ಅಂಧ- ಅನಾಥರು, ಬಡವರಿಗಾಗಿ ಸವೆಸಿ ತಮ್ಮ ಜೀವನ ಸಾರ್ಥಕ ಪಡೆದುಕೊಂಡರು. ಅಂತಹ ಮಹಾ ಪುರುಷರನ್ನು ಸಮಾಜವು ಸದಾ ಸ್ಮರಿಸುತ್ತದೆ ಎಂದರು.
ಕಾರ್ಣಿಕ ಯುಗದ ಮಹಾಪುರುಷರಾದ ಹಾನಗಲ್ ಕುಮಾರೇಶ್ವರ ದಿವ್ಯ ಚೈತನ್ಯ ಶಕ್ತಿಯಿಂದ ಪಂಚಾಕ್ಷರಿ ಗವಾಯಿಗಳರವರನ್ನು ಗುರುತಿಸಿ ಅವರನ್ನು ಗಾನಯೋಗಿಯನ್ನಾಗಿ ಮಾಡಿದ್ದಾರೆ. ಪುಟ್ಟರಾಜ ಗವಾಯಿಗಳು ಗುರುಗಳ ಮಾರ್ಗದರ್ಶನದಲ್ಲಿ ದಾರಿದೀಪವಾಗಿ ನಡೆದು ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.ದೇಶದ ಅನೇಕ ಕಡೆಗಳಲ್ಲಿ ಜಾತ್ರೆ ನಡೆಯುತ್ತದೆ. ಆದರೆ, ಸಂಗೀತದ ಜಾತ್ರೆ ನಡೆಯುವುದು ಮಾತ್ರ ಗದುಗಿನಲ್ಲಿ. ಆಶ್ರಮದ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡು ಪ್ರತಿವರ್ಷ ಇಲ್ಲಿ ಬಂದು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಇಂತಹ ಅನುಭವ ಕಾಣಲು ಇಲ್ಲಿ ಮಾತ್ರ ಸಾಧ್ಯ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದಿನ ಆಧುನಿಕ ಹಾಗೂ ವಸ್ತುಪ್ರಧಾನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಪಾಪ- ಪುಣ್ಯಗಳ ತಕ್ಕಡಿ ಮಾಯವಾಗಿ ಎಲ್ಲವನ್ನೂ ಲಾಭ- ನಷ್ಟದ ತಕ್ಕಡಿಯಲ್ಲಿ ತೂಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಉಭಯ ಮಹಾ ಪುರುಷರು ತಮ್ಮ ಜೀವನದುದ್ದಕ್ಕೂ ಸಾತ್ವಿಕ, ಸದ್ಭಾವನೆ ಹಾಗೂ ಸಾರ್ಥಕತೆಯ ಸಂದೇಶವನ್ನು ಸಾರಿದ್ದಾರೆ. ಅವರ ಪುಣ್ಯಸ್ಮರಣೆ ಮಾಡುವುದು ನಮ್ಮ ಪರಂಪರೆಯಾಗಿದೆ ಎಂದರು.ಈ ವೇಳೆ ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಸ್ವಾಮಿಗಳು, ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಗಳು, ಮೈಸೂರು ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮಿಗಳು, ಮೈಸೂರು ಅರಮನೆ ಪಂಚಗವಿಮಠದ ಶ್ರೀಕಂಠ ಸ್ವಾಮಿಗಳು, ಅಂತೂರ- ಬೆಂತೂರಿನ ಕುಮಾರ ದೇವರು, ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಿಂಗಪ್ಪ ಕೆಂಗಾರ, ಪರಶುರಾಮ ಕಟ್ಟಿಮನಿ, ವಿಶಾಲ ಪವಾರ, ಅರುಣ ಕಟ್ಟಿಮನಿ, ಮಂಜುನಾಥ ಎಸ್.ಪಿ., ರಮೇಶ ಬಸ್ಮಿ, ಮುರಳೀಧರ ದೇಶಪಾಂಡೆ ಸೇರಿದಂತೆ ಮುಂತಾದವರು ಇದ್ದರು.