ಸಂಜೀವಕುಮಾರ ಹಿರೇಮಠ
ಹೊಳೆಆಲೂರಿನಿಂದ ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಹೊಳೆಆಲೂರು ಹಾಗೂ ಅಮರಗೋಳ ನಡುವೆ 1 ಕಿಮೀ ರಸ್ತೆ ಪಕ್ಕ ಮಲಪ್ರಭಾ ನದಿ ನೀರು ಹರಿಯುತ್ತಿದ್ದು, 2019ರಿಂದ 3- 4 ಬಾರಿ ತಡೆ ಕಟ್ಟಿ ಮಣ್ಣು ಹಾಕಿದರೂ ಪ್ರಯೋಜನವಾಗಿಲ್ಲ. ಅರ್ಧ ರಸ್ತೆ ಮಾತ್ರ ಉಳಿದುಕೊಂಡಿದ್ದು, ಪ್ರಯಾಣಿಕರಿಗೆ ಜೀವ ಕಂಟಕವಾಗಿದೆ.
ಈಗ ದೊಡ್ಡ ಸೇತುವೆ ಆಗಿದೆ ಸರಿ, ಮೊದಲು ಸಣ್ಣ ಸೇತುವೆ ಇದ್ದ ಸಂದರ್ಭದಲ್ಲಿ ಮುಳುಗಡೆ ಆದರೆ 10ರಿಂದ 15 ಕಿಮೀ ವ್ಯತ್ಯಾಸವಾಗಬಹುದು ಅಷ್ಟೇ. ಬಿಟ್ಟರೆ ಹೊಳೆಆಲೂರಿನಿಂದ ರೈತರಿಗೆ ಬೇಲೂರು(ಜಾಲಿಹಾಳ) ಸಂತೆಗೆ, ನೈನಾಪುರ, ಮಣ್ಣೀರಿ, ಬಾದಾಮಿ ತಾಲೂಕಿನ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.ಈ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಒಂದು ಆಟೋ ಹೋಗುವಷ್ಟು ಮಾತ್ರ ರಸ್ತೆ ಉಳಿದಿದ್ದು, ಅದು ರಸ್ತೆ ಬುಡದ ಮಣ್ಣು ಹಸಿಯಾಗಿದ್ದು, ಟಾರು ರಸ್ತೆ ಸಹ ಬಿರುಕು ಬಿಡುತ್ತಿದೆ. ಪ್ರಯಾಣಿಕರು ತುಂಬಿದ ವಾಹನ, ವಸ್ತುಗಳು ಲೋಡ್ ಆದ ವಾಹನದ ಚಾಲಕರು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ಇದೆ. ಮಲಪ್ರಭಾ ನದಿ ಸ್ವಲ್ಪ ಏರಿಕೆಯಾಗಿ ಬಂದರೂ ಇಲ್ಲಿಯ ರಸ್ತೆ ಸಂಪೂರ್ಣ ಕುಸಿದು ಬಿದ್ದು, ನದಿ ಸೇರುವ ಸ್ಥಿತಿಯಲ್ಲಿದೆ.
ಶಾಶ್ವತ ಪರಿಹಾರ ಅವಶ್ಯ: 2019ರಿಂದ ಇಲ್ಲಿಯವರೆಗೆ 3- 4 ಬಾರಿ ಕಿತ್ತ ರಸ್ತೆ ಹಾಗೆ 3- 4 ಬಾರಿ ಮಣ್ಣು ಹಾಕಲಾಗಿದೆ. ಆದರೂ ರಸ್ತೆ ಕೊರೆತ ಹೆಚ್ಚಾಗಿದ್ದು, ನಾಲ್ಕೈದು ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತರ ಪಾಡು ಹೇಳಲಾಗದು. ಅದೇ ಪರಿಸ್ಥಿತಿ ನಡುವೆಯೇ ಪ್ರಯಾಣಿಸುತ್ತಾರೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ವ್ಯವಸ್ಥಿತ ಕಾಮಗಾರಿ ಕೈಗೊಂಡು ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಬೇಕಿದೆ.ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ. ನಾವು ಆಟೋರಿಕ್ಷಾ ಓಡಿಸುತ್ತೇವೆ. ಆದರೆ ಬಸ್, ಟ್ರ್ಯಾಕ್ಟರ್, ರೈತರು ಕಾಳು ಕಡಿ ತುಂಬಿ ಸಂಚರಿಸಿದರೆ ಸಮಸ್ಯೆ ಆಗುತ್ತದೆ. ರಸ್ತೆ ಸಂಪೂರ್ಣ ಹಾಳಾದರೆ ಇಲ್ಲಿಯ ರೈತರಿಗೆ ನದಿಯಿಂದ ತುಂಬಾ ಸಮಸ್ಯೆ ಆಗುತ್ತದೆ. ನದಿಯಲ್ಲಿ ನಿತ್ಯ ಹರಿಯುವ ಸ್ವಲ್ಪ ನೀರು ರೈತರ ಜಮೀನಿನ ಮೇಲೆ ಹರಿಯುತ್ತದೆ ಎಂದು ಆಟೋ ಚಾಲಕರು ಹೇಳುತ್ತಾರೆ.