ಬೆಳಗಾವಿ: ಕಳೆದ ವಿಧಾನಸಭೆ ಟಿಕೆಟ್ ಕೈತಪ್ಪಿದ ಬಳಿಕ ರಾಜಕೀಯವಾಗಿ ಕೊಂಚ ಮೌನವಾಗಿದ್ದ ಬೆಳಗಾವಿಯ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಇದೀಗ ದೆಹಲಿ ಭೇಟಿಯ ಮೂಲಕ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾರೆ.

ಬೆಳಗಾವಿ: ಕಳೆದ ವಿಧಾನಸಭೆ ಟಿಕೆಟ್ ಕೈತಪ್ಪಿದ ಬಳಿಕ ರಾಜಕೀಯವಾಗಿ ಕೊಂಚ ಮೌನವಾಗಿದ್ದ ಬೆಳಗಾವಿಯ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಇದೀಗ ದೆಹಲಿ ಭೇಟಿಯ ಮೂಲಕ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸರಣಿ ಭೇಟಿಯಾಗಿರುವುದು ಬೆಳಗಾವಿ ಬಿಜೆಪಿಯೊಳಗೆ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಕೇಂದ್ರ ನಾಯಕರನ್ನು ಭೇಟಿಯಾದ ಬೆನಕೆ ಅವರು ಕರ್ನಾಟಕದ ರಾಜಕೀಯ ಪರಿಸ್ಥಿತಿ, ಪಕ್ಷ ಸಂಘಟನೆ ಹಾಗೂ ಬೆಳಗಾವಿ ಜಿಲ್ಲೆಯ ಸ್ಥಳೀಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದ ವಿಚಾರವೂ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ತಮಗೆ ಟಿಕೆಟ್ ನಿರಾಕರಿಸಿದ ಸಂದರ್ಭದ ಬಗ್ಗೆ ಬೆನಕೆ ರಾಷ್ಟ್ರೀಯ ನಾಯಕತ್ವದ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬೆಳಗಾವಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ತಮ್ಮ ರಾಜಕೀಯ ಹಿನ್ನೆಲೆ ಹಾಗೂ ಪಕ್ಷ ಸಂಘಟನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸದೆ ಟಿಕೆಟ್ ಕೈತಪ್ಪಿದ್ದೇಕೆ ಎಂಬ ಪ್ರಶ್ನೆಯನ್ನು ನಾಯಕತ್ವದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ವಿಶೇಷವಾಗಿ ಬೆಳಗಾವಿಯ ರಾಜಕೀಯ ಸಮೀಕರಣದಲ್ಲಿ ಮರಾಠಾ ಸಮುದಾಯದ ಪ್ರಾತಿನಿಧ್ಯವೂ ಪ್ರಮುಖ ಅಂಶವಾಗಿರುವುದರಿಂದ, ಬೆನಕೆ ಅವರ ರಾಜಕೀಯ ಪಾತ್ರದ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆ ನಡೆದಿರುವ ಸಾಧ್ಯತೆ ಕುರಿತು ಸ್ಥಳೀಯ ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿದೆ.