ಶಿರಸಿ: ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಪಂಚ ಗ್ಯಾರಂಟಿ ಯೋಜನೆಗೆ ಈ ವರೆಗೆ ₹1 ಲಕ್ಷ ಕೋಟಿ ಖರ್ಚಾಗಿದೆ. ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದು ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಆರ್ಥಿಕ ಮಟ್ಟ ಅಧಿಕಗೊಂಡಿದ್ದು, ಹೊಸ ಬಸ್ ಖರೀದಿ, ಖಾಲಿ ಇರುವ ಚಾಲಕ-ನಿರ್ವಾಹಕರ ಭರ್ತಿ ಮಾಡಿದ್ದೇವೆ. ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನೂ ಹೆಚ್ಚಿನ ಹೊಸ ಬಸ್ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗೃಹಲಕ್ಷ್ಮೀ ಯೋಜನೆ ಮೂಲಕ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ತಲಾ ಆದಾಯದಲ್ಲಿ ದೇಶದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನ ಪಡೆದಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಸ್ವ-ಸಹಾಯ ಸಂಘ ಸ್ಥಾಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ತೀರ್ಮಾನಿಸಿದ್ದಾರೆ. ಇದು ಮೊದಲು ರಾಜ್ಯ ಮಟ್ಟದಲ್ಲಿ ಪ್ರಾರಂಭವಾಗಿ ಜಿಲ್ಲೆ ಹಾಗೂ ತಾಲೂಕು ಹಂತದಲ್ಲಿ ರಚನೆಯಾಗಲಿದೆ. ಕಡಿಮೆ ಬಡ್ಡಿದರಲ್ಲಿ ಸಂಘದಲ್ಲಿ ₹3 ಲಕ್ಷ ವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇದು ಬ್ಯಾಂಕ್ ಆಗಿ ಪರಿವರ್ತಿಸುವ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು.
ಐದೂವರೆ ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದೆ. ಆದ್ದರಿಂದ ರಸ್ತೆ ಹಾಳಾಗಲು ಪ್ರಮುಖ ಕಾರಣವಾಗಿದೆ. ಆದಷ್ಟು ಶೀಘ್ರವಾಗಿ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ನಾಗರಾಜ ಮುರ್ಡೇಶ್ವರ, ಶಿರಸಿ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷೆ ಸುಮಾ ಉಗ್ರಾಣಕ, ತಾಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಹಾವಣಗಿ ಮತ್ತಿತರರು ಇದ್ದರು.
ಹೈಕಮಾಂಡ್‌ಗೆ ಬಿಟ್ಟ ವಿಚಾರ: ನವೆಂಬರ್ ಕ್ರಾಂತಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಸ್.ಆರ್. ಪಾಟೀಲ, ರಾಜಕೀಯ ವಿಷಯ ಹೈಕಮಾಂಡ್ ಬಿಟ್ಟ ವಿಚಾರ. ಐದು ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಕೆಲಸ. ರಾಜಕೀಯದ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದು ನುಣುಚಿಕೊಂಡರು.