ಬಸವ ಸಾಗರದಿಂದ ಕೃಷ್ಣಾ ನದಿಗೆ 1ಲಕ್ಷ ಕ್ಯುಸೆಕ್ ನೀರು ಬಿಡುಗಡೆ

KannadaprabhaNewsNetwork | Published : Jul 21, 2024 1:20 AM

ಸಾರಾಂಶ

ಕೊಡೇಕಲ್ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯದ 22 ಕ್ರಸ್ಟ್ ಗೇಟ್ ಗಳ ಮೂಲಕ ಶನಿವಾರ 1 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಅನಿಲ್‌ ಬಿರಾದರ್‌

ಕನ್ನಡಪ್ರಭ ವಾರ್ತೆ, ಕೊಡೇಕಲ್

ಸಮೀಪದ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ಪ್ರತಿನಿತ್ಯ ಒಳಹರಿವು ಬರುತ್ತಿರುವುದರಿಂದ ಬುಧವಾರದಿಂದಲೇ ಜಲಾಶಯದಿಂದ ನದಿಗೆ ನೀರು ಹರಿಬಿಡುತ್ತಿದ್ದು, ಶನಿವಾರ ಸಂಜೆಯ ಹೊತ್ತಿಗೆ 1 ಲಕ್ಷ ಕ್ಯುಸೆಕ್ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.

ಆಲಮಟ್ಟಿ ಹಾಗೂ ಬಸವಸಾಗರ ಉಭಯ ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದು ಹಾಗೂ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಸಹ ಅಧಿಕವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಜಾಸ್ತಿಯಾದಲ್ಲಿ ನದಿಗೂ ಸಹ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆಗಳಿದ್ದು ನದಿ ತೀರದ ಜನತೆ ಜಾಗೃತದಿಂದರಬೇಕು ಎಂದು ನಾರಾಯಣಪುರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಕುಮಾರ ಅರಳಿ ತಿಳಿಸಿದ್ದಾರೆ.

ನಿಗಮ ಅಧಕಾರಿಗಳಿಂದ ಸದ್ಯ ಸುತ್ತೋಲೆ ಹೋರಡಿಸಿದ್ದು, ಈ ಕೆಳಕಂಡಂತೆ ಬಸವಸಾಗರ ಜಲಾಶಯದಿಂದ ಬಿಡುವ ನೀರಿನ ಪ್ರಮಾಣದಿಂದ ಪ್ರವಾಹ ಉಂಟಾಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ ಎಂದು ತಿಳಿಸಿದೆ.

492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 491.45 ಮೀ ತಲುಪಿದ್ದು 29.70 ಟಿಎಂಸಿ ನೀರಿನ ಸಂಗ್ರಹವಿದೆ (ಒಟ್ಟು ಸಾಮರ್ಥ್ಯ 33.31 ಟಿಎಂಸಿ). ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.

ಪ್ರವಾಹ ಮುನ್ನೆಚ್ಚರಿಕೆ : ಎಲ್ಲೆಲ್ಲಿ ಏನೇನು ?

ನಾರಾಯಣಪುರದ ಬಸವ ಸಾಗರ ಜಲಾಶಯದಿಂದ 1 ಲಕ್ಷ ಕ್ಯುಸೆಕ್ ವರೆಗೆ ನೀರನ್ನು ಕೃಷ್ಣಾ ನದಿಗೆ ಹರಿಸಿದರೆ, ನದಿಪಾತ್ರದಲ್ಲಿರುವ ಗ್ರಾಮಗಳ ಜನ-ಜಾನುವಾರುಗಳಿಗೆ ಸುರಕ್ಷತೆಗಾಗಿ ನದಿಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ.

1.50 ಲಕ್ಷ ಕ್ಯುಸೆಕ್ ವರೆಗೆ ನೀರು ಹರಿಸಿದರೆ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮ ನಡುಗಡ್ಡೆಯಾಗಬಹುದು.

2 ಲಕ್ಷ ಕ್ಯಸೆಕ್: ಹೂವಿನ ಹೆಡಗಿ ಸೇತುವೆ (ದೇವದುರ್ಗ-ಕಲಬುರಗಿ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು. 2.50 ಲಕ್ಷ ಕ್ಯುಸೆಕ್ : ಲಿಂಗಸೂರು ತಾಲೂಕಿನ ಶೀಲಹಳ್ಳಿ ಮತ್ತು ಯರಗೋಡಿ ಸೇತುವೆಗಳು ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು.

3 ಲಕ್ಷ ಕ್ಯುಸೆಕ್‌ವರೆಗೆ ನೀರು ಬಿಟ್ಟರೆ ಕೃಷ್ಣಾ ನದಿ ಇಕ್ಕೆಲಗಳಲ್ಲಿ ಪ್ರವಾಹ ಉಕ್ಕಿ ಹರಿಯುವದರಿಂದ, ನದಿ ಮೇಲ್ಪಟ್ಟ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹದಿಂದ ಸುರಕ್ಷಿತರಾಗಿರಬೇಕು.

3.90 ಲಕ್ಷ ಕ್ಯುಸೆಕ್ಸ್ ನೀರು ಹರಿಸಿದರೆ ಗುರ್ಜಾಪುರ ಬ್ಯಾರೇಜ್ ಹಾಗೂ ಸೇತುವೆ ಮುಳುಗಡೆಯಾಗಬಹುದು.

5.40 ಲಕ್ಷ ಕ್ಯಸೆಕ್‌ ನೀರು ಹರಿಸಿದರೆ ಯರಗೋಡಿ ಸೇತುವೆ ಮತ್ತು ಗೂಗಲ್ ಗ್ರಾಮದ ಹತ್ತಿರ ಗೂಗಲ್ ಬ್ಯಾರೇಜ್ ಮುಳುಗಡೆಯಾಗಬಹುದು.

7.50 ಕ್ಯುಸೆಕ್‌ ನೀರು ಹರಿಸಿದರೆ ಸುರಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ತಿಂಥಣಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು.

Share this article