ಕುಷ್ಟಗಿ: ಗ್ರಾಮೀಣ ಪ್ರದೇಶ ಶಾಲೆಗಳ ಅಭಿವೃದ್ಧಿಗೆ ತಾಲೂಕಿನ ಹಿರೇನಂದಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಕೆ.ಆರ್. ಸುಧಾಮಣಿ ₹ 1 ಲಕ್ಷ ಮೊತ್ತದ ಚೆಕ್‌ನ್ನು ಬಿಇಒ ಸುರೇಂದ್ರ ಕಾಂಬಳೆ ಅವರಿಗೆ ನೀಡಿ ಇತರರಿಗೂ ಮಾದರಿಯಾಗಿದ್ದಾರೆ.
ದೇಣಿಗೆ ನೀಡಿದ ಸಹಶಿಕ್ಷಕಿ ಸನ್ಮಾನಿಸಿದ ಬಿಇಒ, ಸಮಾಜದ ಕಟ್ಟಕಡೆಯ ಮಗುವಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಸರ್ಕಾರಿ ಶಾಲೆ ಅಭಿವೃದ್ಧಿಗೆ ಇಂತಹ ಶಿಕ್ಷಕರು ಕೈಜೋಡಿಸುತ್ತಿರುವುದು ಸಂತಸ ತಂದಿದೆ. ಇದು ನಮ್ಮ ಶಿಕ್ಷಣ ಇಲಾಖೆಯ ಶಿಕ್ಷಕರ ಘನತೆ ಹೆಚ್ಚಿಸಿದೆ ಎಂದರು.
ಸಹಶಿಕ್ಷಕಿ ಕೆ.ಆರ್. ಸುಧಾಮಣಿ ಮಾತನಾಡಿ, ನನಗೆ ಮಕ್ಕಳಿಂದಿಲೇ ಅನ್ನ ದೊರೆಯುತ್ತದೆ, ಬದುಕಿಗೆ ಅನ್ನ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾದ ಮಕ್ಕಳು ಕಲಿಯುವ ಶಾಲಾ ಅಭಿವೃದ್ಧಿಗೆ ದೇಣಿಗೆ ನೀಡಿದ್ದೇನೆ. ಪ್ರತಿ ವರ್ಷ ಇಲಾಖೆ 15 ಸಾಂದರ್ಭಿಕ ರಜಾ ಸೌಲಭ್ಯ ನೀಡುತ್ತಿದೆ. ನಾನು ಪಡೆದೆ ರಜೆ ದಿನಗಳಲ್ಲಿ ಬಂದ ವೇತನ ಸೇರಿಸಿ ಶಾಲೆಗೆ ದೇಣಿಗೆ ನೀಡಿದ್ದೇನೆ. ನಾನು ಇಲಾಖೆಯ ನಿಯಮಗಳ ಪ್ರಕಾರ ಸಾಂದರ್ಭಿಕ ರಜೆ ಪಡೆದ ದಿನಗಳಲ್ಲೂ ಸರ್ಕಾರ ಸಂಬಳ ನೀಡಿದ್ದು ಆ ಸಂಬಳವನ್ನು ಮರಳಿ ಶಾಲೆಗೆ ನೀಡಿದ್ದೇನೆ ಎಂದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಅದಕ್ಕೆ ಜನಸಮುದಾಯ ಮುಂದಾಗಬೇಕು. ಅಂದಾಗ ಮಾತ್ರ ಸರ್ಕಾರಿ ಶಾಲೆ ಉಳಿಯಲು ಸಾಧ್ಯವಾಗಲಿದೆ ಎಂದರು.
ಈ ವೇಳೆ ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ, ಕಾರ್ಯದರ್ಶಿ ಬೀರಪ್ಪ ಕುರಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಸೋಮಲಿಂಗಪ್ಪ ಗುರಿಕಾರ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಈರಪ್ಪ, ಭೂದಾನಿ ಹನುಮಂತಗೌಡ್ರ, ಬಿಆರ್‌ಪಿ ಜೀವನಸಾಬ ವಾಲಿಕಾರ, ಮುಖ್ಯಶಿಕ್ಷಕ ಹನುಮಪ್ಪ ಹೊರಪೇಟೆ, ಸಿಆರ್‌ಪಿ ಶರಣಪ್ಪ ಉಪ್ಪಾರ ಉಪಸ್ಥಿತರಿದ್ದರು.