ಪದವಿ ಇಲ್ಲದೇ ವೈದ್ಯವೃತ್ತಿ ಮಾಡುತ್ತಿದ್ದ 6 ಜನರಿಗೆ 1 ಲಕ್ಷ ದಂಡ

KannadaprabhaNewsNetwork | Published : Jan 8, 2025 12:15 AM

ಸಾರಾಂಶ

ವೈದ್ಯಕೀಯ ಪದವಿ ವೃತ್ತಿ ಪಡೆಯದೇ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ನೀಡುವ ನಕಲಿ ವೈದ್ಯರ ವಿರುದ್ಧ ದಂಡ ಅಥವಾ ಎಫ್‌ಐಆರ್ ದಾಖಲಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚಿಸಿದರು.

ಬಳ್ಳಾರಿ: ವೈದ್ಯಕೀಯ ಪದವಿ ವೃತ್ತಿ ಪಡೆಯದೇ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ನೀಡುವ ನಕಲಿ ವೈದ್ಯರ ವಿರುದ್ಧ ದಂಡ ಅಥವಾ ಎಫ್‌ಐಆರ್ ದಾಖಲಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕೆಪಿಎಂಇ ಕಾಯ್ದೆ ನೋಂದಣಿ ಮತ್ತು ಕುಂದುಕೊರತೆಗಳ ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಯಾರಾದರು ಅಧಿಕೃತ ವೈದ್ಯಕೀಯ ಪದವಿ ಪಡೆಯದೇ ವೈದ್ಯ ವೃತ್ತಿ ಮಾಡುವವರ ಮನೆ, ಮಳಿಗೆ, ಇತರೆ ಯಾವುದೇ ರೀತಿಯ ಕಟ್ಟಡಗಳಿಗೆ ಆರೋಗ್ಯಾಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಬೇಕು. ಅಂತಹವರಿಗೆ ಬಾಡಿಗೆ ಕಟ್ಟಡ ನೀಡಿದ್ದಲ್ಲಿ ಕಟ್ಟಡ ಮಾಲೀಕರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯಕೀಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸಲು ಸೂಚಿಸಬೇಕು. ಇದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅನಧಿಕೃತವಾಗಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ ಅವರ ವೈದ್ಯಕೀಯ ಪದವಿಯ ಮಾಹಿತಿ ಹೊಂದಿ ಚಿಕಿತ್ಸೆ ಪಡೆಯಬೇಕು. ನಕಲಿ ವೈದ್ಯರು ಎಂದು ಕಂಡುಬಂದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ವೈದ್ಯವೃತ್ತಿ ಮಾಡುತ್ತಿದ್ದ ನಕಲಿ ವೈದ್ಯ ಬಸವರಾಜ್ ವಿರುದ್ಧ ಮೋಕ ಪೋಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಸೂಚಿಸಿದ ಅವರು, ಕಪ್ಪಗಲ್ಲು ಗ್ರಾಮದ ರಾಜಣ್ಣ, ರೆಹಮಾನ್, ಶೇಕ್ಷಾವಲಿ, ಗುರು ಪ್ರಕಾಶ್, ಮಹಾದೇವ ಮತ್ತು ಸಿರುಗುಪ್ಪ ತಾಲೂಕಿನ ಕೆ.ಸೂಗೂರು ಗ್ರಾಮದ ಬೆಂಚಿ ಕ್ಯಾಂಪ್‌ನ ಕೆ.ಚಂದ್ರಶೇಖರ್ ಸೇರಿದಂತೆ ಒಟ್ಟು 6 ಜನರ ವಿರುದ್ದ ತಲಾ ₹1 ಲಕ್ಷ ದಂಡ ವಿಧಿಸಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್‌ಬಾಬು, ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಪೂರ್ಣಿಮಾ ಎಸ್. ಕಟ್ಟಿಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ವಿ., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರಕುಮಾರ್, ಐಎಂಎ ಅಧ್ಯಕ್ಷ ಡಾ. ಮಾಣಿಕ್‌ರಾವ್ ಕುಲಕರ್ಣಿ, ಡಾ. ಶಿವಕುಮಾರ್, ಎಫ್‌ಪಿಎಐನ ವ್ಯವಸ್ಥಾಪಕರಾದ ವಿಜಯಲಕ್ಷ್ಮೀ, ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article