ಪ್ರಕೃತಿ ವಿಕೋಪಕ್ಕೆ ರಾಜ್ಯದಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Oct 25, 2024, 12:54 AM IST
24ಕೆಎಂಎನ್ ಡಿ24 | Kannada Prabha

ಸಾರಾಂಶ

ರಾಜ್ಯಾದಂತ ಈ ಬಾರಿ 82ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ವಿವಿಧ ಬಗೆಯ ಬೆಳೆಗಳನ್ನು ಬೆಳೆದಿದ್ದಾರೆ. ಈಗಾಗಲೇ 40 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಕಟಾವು ಆಗಿದೆ. ಇನ್ನುಳಿದ 40 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಬೆಳೆ ಬೆಳೆದು ನಿಂತಿದೆ. ಒಂದು ಲಕ್ಷ ಹೆಕ್ಟೇರ್‌ನಲ್ಲಿ ಪ್ರಕೃತಿ ವಿಕೋಪಕ್ಕೆ ಬೆಳೆ ನಷ್ಟವಾಗಿದೆ. ನಷ್ಟ ಹೊಂದಿರುವ ಎಲ್ಲ ರೈತರಿಗೂ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯದೆಲ್ಲೆಡೆ ಮಳೆಯಿಂದಾದ ಪ್ರಕೃತಿ ವಿಕೋಪಕ್ಕೆ 1 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ವಿವಿಧ ಬೆಳೆ ನಷ್ಟವಾಗಿದೆ. ನಷ್ಟ ಹೊಂದಿರುವ ರೈತರಿಗೆ ಸರ್ಕಾರ ಬೆಳೆ ಪರಿಹಾರ ನೀಡಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಹೊನ್ನಾವರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ 50 ಕ್ಕೂ ಅರ್ಹ ಫಲಾನುಭವಿ ರೈತರಿಗೆ ಚಾಪ್ ಕಟರ್ ಯಂತ್ರಗಳನ್ನು ವಿತರಿಸಿ ಮಾತನಾಡಿದರು.

ರಾಜ್ಯಾದಂತ ಈ ಬಾರಿ 82ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ವಿವಿಧ ಬಗೆಯ ಬೆಳೆಗಳನ್ನು ಬೆಳೆದಿದ್ದಾರೆ. ಈಗಾಗಲೇ 40 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಕಟಾವು ಆಗಿದೆ. ಇನ್ನುಳಿದ 40 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಬೆಳೆ ಬೆಳೆದು ನಿಂತಿದೆ. ಒಂದು ಲಕ್ಷ ಹೆಕ್ಟೇರ್‌ನಲ್ಲಿ ಪ್ರಕೃತಿ ವಿಕೋಪಕ್ಕೆ ಬೆಳೆ ನಷ್ಟವಾಗಿದೆ. ನಷ್ಟ ಹೊಂದಿರುವ ಎಲ್ಲ ರೈತರಿಗೂ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ಕೃಷಿ ಪದ್ಧತಿಯಲ್ಲಿ ಹಲವು ಬದಲಾವಣೆಯಾಗಿದ್ದು, ಹವಾಮಾನಕ್ಕೆ ತಕ್ಕಂತೆ ಕೃಷಿಯನ್ನು ಬೆಳೆಯಬೇಕು. ರೈತರ ಜಮೀನುಗಳಲ್ಲಿ ಕೃಷಿ ಕೆಲಸ ಮಾಡುವ ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರ ಕೊರತೆ ನೀಗಿಸಲು ಹಲವು ಯೋಜನೆಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದರು.

ಆಧುನಿಕ ಕೃಷಿ ಪದ್ಧತಿಯಡಿ ವಿವಿಧ ರೀತಿಯ ಯಂತ್ರೋಪಕರಣ ವಿತರಣೆ, ಕೃಷಿ ಹೊಂಡ ಸೇರಿದಂತೆ ರೈತರಿಗೆ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಡಲಾಗುತ್ತಿದೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿಯ ಜೊತೆಗೆ ಸರ್ಕಾರದ ಎಲ್ಲ ಯೋಜನೆಗಳ ಲಾಭವನ್ನು ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಳೆದ ಐದು ವರ್ಷ ಅಧಿಕಾರ ನಡೆಸಿದ ಜೆಡಿಎಸ್ ಬಿಜೆಪಿ ಸರ್ಕಾರದ ಸಾಧನೆ ಏನು? ರೈತರಿಗೆ ಅನುಕೂಲವಾಗುವ ಯಾವುದಾದರೂ ಒಂದು ಯೋಜನೆ ಜಾರಿ ಮಾಡಲಿಲ್ಲ. ಕೇವಲ ಅಧಿಕಾರ ನಡೆಸಿ ಮಜಾ ಮಾಡಿಕೊಂಡು ಹೋದರು ಎಂದು ದೂರಿದರು.

ಯಾರೇ ಶಾಸಕರಾದ ಪಕ್ಷಬೇಧ ಮರೆತು ಕೆಲಸ ಮಾಡಬೇಕು. 2003ರಲ್ಲಿ ನಾನು ಶಾಸಕನಾಗಿ ಜಾರಿಗೆ ತಂದಿದ್ದ ತಾಲೂಕಿನ ನಾಗಮಂಗಲ-ಶ್ರವಣಬೆಳಗೂಳ ರಸ್ತೆ ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಲು 2023ರಲ್ಲಿ ನಾನು ಮತ್ತೆ ಶಾಸಕನಾಗಿ ಬರಬೇಕಾಯಿತು ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡ ಅವರ ಕಾರ್ಯವೈಖರಿಯನ್ನು ಟೀಕಿಸಿದರು.

ಮಂಡ್ಯದ ರೈತರೊಬ್ಬರಿಗೆ ಒಂದು ಕೋಟಿ ಬೆಲೆ ಬಾಳುವ ಯಂತ್ರಕ್ಕೆ 40 ಲಕ್ಷ ರಿಯಾಯಿತಿ ನೀಡಲಾಗಿದೆ. ಕೃಷಿಯಲ್ಲಿ ಸಮಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಬಾರಿ ಮೂರು ಸಾವಿರ ಕೋಟಿಯಷ್ಟು ವಿಮೆ ಹಣವನ್ನು ವಿವಿಧ ಯೋಜನೆಯಡಿ ರೈತರಿಗೆ ಪಾವತಿ ಮಾಡಿದ್ದೇವೆ. ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಮೊತ್ತ ಎಂದು ಹೇಳಿದರು.

ಇದೇ ವೇಳೆ 70 ಲಕ್ಷ ವೆಚ್ಚದಲ್ಲಿ 50 ಕ್ಕೂ ಹೆಚ್ಚು ರೈತ ಫಲಾನುಭವಿಗಳಿಗೆ ಜಾನುವಾರುಗಳ ಮೇವು ಕತ್ತರಿಸುವ ಚಾಪ್ ಕಟರ್ ವಿತರಿಸಲಾಯಿತು. ಅಂಚೆಭೂವನಹಳ್ಳಿ, ಬ್ರಹ್ಮದೇವರಹಳ್ಳಿಯಲ್ಲೂ ಕೂಡ ರೈತರಿಗೆ ಚಾಪ್ ಕಟರ್ ವಿತರಿಸಲಾಯಿತು.

ಈ ವೇಳೆ ಮಾಜಿ ಎಂಎಲ್‌ಸಿ ಎನ್.ಅಪ್ಪಾಜಿಗೌಡ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿದೇಶಕ ಡಾ.ಭಾನುಪ್ರಕಾಶ್, ಮುನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಹೊನ್ನಾವರ ಗ್ರಾಪಂ ಅಧ್ಯಕ್ಷ ಹರೀಶ್, ಮುಖಂಡರಾದ ಬೋರೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ