ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಚಿಮುಲ್ ವಿಭಜಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪನ್ನು ಸ್ವಾಗತಿಸಿರುವ ಸಂಸದ ಡಾ.ಕೆ.ಸುಧಾಕರ್, ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಹೋರಾಟಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಕೆ.ಸುಧಾಕರ್, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರಲು ಶ್ರಮಿಸಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರದ್ದು ಮಾಡಿತ್ತು. ಇದರಿಂದಾಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿತ್ತು. ಈ ಆದೇಶ ರದ್ದಾಗಿರುವುದನ್ನು ಹಿಂಪಡೆಯುವಂತೆ ಡಾ.ಕೆ.ಸುಧಾಕರ್ ನಿರಂತರವಾಗಿ ಆಗ್ರಹಿಸುತ್ತಿದ್ದರು. ಈಗ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಈ ಕ್ರಮವನ್ನು ಎತ್ತಿ ಹಿಡಿದಿದ್ದು, ಆದೇಶವನ್ನು ಮರುಸ್ಥಾಪನೆ ಮಾಡುವಂತೆ ತೀರ್ಪಿನಲ್ಲಿ ಹೇಳಿದೆ.
ಈ ಕುರಿತು ಸಂಸದ ಡಾ.ಕೆ.ಸುಧಾಕರ್ ಸಂತಸ ವ್ಯಕ್ತಪಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ನಮ್ಮ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಲು ಪ್ರತ್ಯೇಕ ಹಾಲು ಒಕ್ಕೂಟದ ಅಗತ್ಯವಿದೆ ಎಂದು ಹೋರಾಟ ಮಾಡಿದ್ದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸದಸ್ಯರನ್ನು ಮನವೊಲಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ದ್ವೇಷದ ರಾಜಕಾರಣ ಮಾಡಿ, ನನ್ನ ಮೇಲಿನ ಸೇಡಿಗಾಗಿ ಆದೇಶವನ್ನು ಏಕಾಏಕಿ ರದ್ದು ಮಾಡಿತ್ತು. ಈ ಮೂಲಕ ಜಿಲ್ಲೆಯ ರೈತರ ಹಕ್ಕು ಕಸಿದುಕೊಳ್ಳುವ ಪಾಪದ ಕೆಲಸ ಮಾಡಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.ತಪ್ಪೊಪ್ಪಿಕೊಂಡ ಕಾಂಗ್ರೆಸ್:
‘ಬೆಟ್ಟ ಅಗೆದು ಇಲಿ ಹಿಡಿದರು’ ಎಂಬಂತೆ ರಾಜಕೀಯ ಸ್ವಾರ್ಥಕ್ಕಾಗಿ ಹಾಗೂ ದ್ವೇಷ ರಾಜಕಾರಣಕ್ಕಾಗಿ 17 ತಿಂಗಳ ಹಿಂದೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯ ಆದೇಶವನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸಿತ್ತು. ಈಗ ನ್ಯಾಯಾಲಯದಲ್ಲಿ ಕೋಚಿಮುಲ್ ಹಾಲು ಒಕ್ಕೂಟವನ್ನು ವಿಭಜನೆ ಮಾಡಿದ್ದ ಆದೇಶವೇ ಸರಿ ಇದೆ ಎಂದು ಹೈಕೋರ್ಟ್‌ನಲ್ಲಿ ಸರ್ಕಾರ ಒಪ್ಪಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ಈ ದ್ವಂದ್ವ ನೀತಿಯಿಂದ ಮತ್ತು ಎಡಬಿಡಂಗಿ ನಡೆಯಿಂದ 17 ತಿಂಗಳು ವ್ಯರ್ಥವಾಗಿದೆ. ಕೆಲವೇ ಕೆಲವು ನಾಯಕರ ಸ್ವಾರ್ಥ ರಾಜಕಾರಣಕ್ಕೆ 17 ತಿಂಗಳ ಕಾಲ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ರೈತರಿಗಾದ ಈ ನಷ್ಟಕ್ಕೆ ಯಾರು ಹೊಣೆ? ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದಾರೆ.ಕೋರ್ಟ್ ತೀರ್ಪು ಕಾಂಗ್ರೆಸ್ ನಾಯಕರಿಗೆ ಕಪಾಳ ಮೋಕ್ಷ ಮಾಡಿದ್ದು, ಇನ್ನು ಮುಂದಾದರೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ ಜನಪರವಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ, ನೀತಿ ಪಾಠ ಹೇಳುವ ಕಾಂಗ್ರೆಸ್ ನಾಯಕರು ಕೋಚಿಮುಲ್ ಆಡಳಿತ ಮಂಡಳಿಯ ಅವಧಿಯು 2024ರ ಮೇ 12 ಕ್ಕೇ ಮುಕ್ತಾಯವಾಗಿದ್ದರೂ ಇನ್ನೂ ಚುನಾವಣೆ ನಡೆಸಿಲ್ಲ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಹೂಡಲಾಗಿದ್ದ ದಾವೆಗೆ ಕೋರ್ಟ್ ತೀರ್ಪು ನೀಡಿದ್ದು, ಆಡಳಿತ ಮಂಡಳಿ ರಚನೆಗಾಗಿ 90 ದಿನಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕೆಂದು ಜುಲೈ 17 ರಂದು ಆದೇಶಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಅಕ್ರಮ ನೇಮಕಾತಿ, ಭ್ರಷ್ಟಾಚಾರದ ಮೂಲಕ ರೈತರ ಹಣ ಲೂಟಿ ಮಾಡಲು ಚುನಾವಣೆ ನಡೆಸದೆ ಅಧಿಕಾರಕ್ಕೆ ಅಂಟಿಕೊಂಡಿರುವ ಕಾಂಗ್ರೆಸ್ ನಾಯಕರು, ಈ ಕೂಡಲೇ ಹಾಲು ಒಕ್ಕೂಟದ ವಿಭಜನೆಯ ಪ್ರಕ್ರಿಯೆ ಆರಂಭಿಸಿ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಸತ್ಯಕ್ಕೆ ಸಂದ ಜಯ:
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ನಮ್ಮ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಲು ಹೈಕೋರ್ಟ್ ತೀರ್ಪು ನೀಡಿದ್ದು, ಇದು ಕೋಲಾರ ಮತ್ತು ಚಿಕ್ಕಳ್ಳಾಪುರ ಜಿಲ್ಲೆಯ ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ಕೂಡಲೇ ಹಾಲು ಒಕ್ಕೂಟದ ವಿಭಜನೆಯ ಪ್ರಕ್ರಿಯೆ ಆರಂಭಿಸಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.