ದಾರಂದಕುಕ್ಕು ಬಸ್‌ ತಂಗುದಾಣ ವಿವಾದ: ಎಸಿ ನೇತೃತ್ವದಲ್ಲಿ ಅಧಿಕಾರಿಗಳ ಪರಿಶೀಲನೆ

KannadaprabhaNewsNetwork |  
Published : Oct 25, 2024, 12:54 AM IST
ಫೋಟೋ: ೨೪ಪಿಟಿಆರ್-ದಾರಂದಕುಕ್ಕು ೧ ಮತ್ತು ೨ಅಧಿಕಾರಿಗಳ ಸ್ಥಳ ಪರಿಸೀಲನೆ ಸಂದರ್ಭದಲ್ಲಿ ಸೇರಿರುವ ಸ್ಥಳೀಯರು | Kannada Prabha

ಸಾರಾಂಶ

ಪರಿಶೀಲನೆ ನಡೆಸಿದ ಸಹಾಯಕ ಆಯುಕ್ತರು, ಪ್ರಯಾಣಿಕರ ತಂಗುದಾಣದ ಬಗ್ಗೆ ಸರ್ಕಾರಕ್ಕೆ ಸಾರ್ವಜನಿಕ ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ದೂರಿನ ಬಗ್ಗೆ ಮಾಹಿತಿ ಪಡೆಯಲು ಸ್ಥಳ ತನಿಖೆ ನಡೆಸಲಾಗುತ್ತಿದೆ. ತಂಗುದಾಣವನ್ನು ತೆರವುಗೊಳಿಸುವುದಿಲ್ಲ. ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕಳೆದ ಹಲವು ವರ್ಷಗಳ ಹಿಂದೆ ಆರಂಭಗೊಂಡಿರುವ ಪುತ್ತೂರು- ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕು ಎಂಬಲ್ಲಿರುವ ಪ್ರಯಾಣಿಕರ ತಂಗುದಾಣದ ವಿವಾದವು ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ತಂಗುದಾಣದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಆದೇಶದಂತೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಆಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ದಾರಂದಕುಕ್ಕು ಎಂಬಲ್ಲಿ ಮುಖ್ಯರಸ್ತೆ ಬದಿಯಲ್ಲಿರುವ ಪ್ರಯಾಣಿಕರ ತಂಗುದಾಣವು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದ ಸಾರ್ವಜನಿಕ ದೂರಿನಲ್ಲಿ ಹಿನ್ನೆಲೆಯಲ್ಲಿ ಭೇಟಿ ನೀಡಿದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಕಂದಾಯ ಇಲಾಖೆ, ಭೂ ಮಾಪನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಯಾ ಇಲಾಖಾಧಿಕಾರಿಗಳು ಅಲ್ಲಿನ ವಸ್ತುಸ್ಥಿತಿಗಳ ಬಗ್ಗೆ ವಿವರಿಸಿದರು. ಬಳಿಕ ಸೇರಿದ್ದ ಸಾರ್ವಜನಿಕರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಪರಿಶೀಲನೆ ನಡೆಸಿದ ಸಹಾಯಕ ಆಯುಕ್ತರು, ಪ್ರಯಾಣಿಕರ ತಂಗುದಾಣದ ಬಗ್ಗೆ ಸರ್ಕಾರಕ್ಕೆ ಸಾರ್ವಜನಿಕ ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ದೂರಿನ ಬಗ್ಗೆ ಮಾಹಿತಿ ಪಡೆಯಲು ಸ್ಥಳ ತನಿಖೆ ನಡೆಸಲಾಗುತ್ತಿದೆ. ತಂಗುದಾಣವನ್ನು ತೆರವುಗೊಳಿಸುವುದಿಲ್ಲ. ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಸ್ಥಳದಲ್ಲಿ ನೂರಾರು ಮಂದಿ ಜಮಾವಣೆ: ಸಹಾಯಕ ಆಯುಕ್ತರು ಸ್ಥಳ ಪರಿಶೀಲನೆಗೆ ಭೇಟಿ ನೀಡುವ ಬಗ್ಗೆ ಮಾಹಿತಿ ಪಡೆದ ಕೋಡಿಂಬಾಡಿ, ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ ಗ್ರಾಮಗಳ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ರಾಘವೇಂದ್ರ, ತಿಮ್ಮಪ್ಪ ಪೂಜಾರಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ಗ್ರಾ.ಪಂ ಸದಸ್ಯ ಪ್ರಶಾಂತ್ ಸೇರಿದಂತೆ ಮೂರು ಗ್ರಾಮಗಳ ನೂರಾರು ಮಂದಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ತಹಸೀಲ್ದಾರ್ ಪುರಂದರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜರಾಮ್, ಸಹಾಯಕ ಎಂಜಿನಿಯರ್ ಪ್ರಮೋದ್, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭರತ್ ಬಿ.ಎಂ., ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಮೂರ್ತಿ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ಬನ್ನೂರು ಗ್ರಾ.ಪಂ ಪಿಡಿಒ ಚಿತ್ರಾವತಿ, ಗ್ರಾಮ ಆಡಳಿತಾಧಿಕಾರಿ ಕವಿತಾ ಉಪಸ್ಥಿತರಿದ್ದರು.---- ಸಾರ್ವಜನಿಕ ದೂರು ಬಂದಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ತನಿಖೆ ನಡೆಸಲಾಗಿದೆ. ಸ್ಥಳೀಯರ ಮೂಲಕ ಮಹಜರು ಮಾಡಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಮನವಿಯ ಮೇರೆಗೆ ವಾಸ್ತವಾಂಶ ತಿಳಿದುಕೊಳ್ಳಲು ತನಿಖೆ ನಡೆಸಲಾಗಿದೆ. ಈ ಹಿಂದೆಯು ಸಮಿತಿ ರಚಿಸಲಾಗಿತ್ತು. ಅದರ ಒಂದು ವರದಿಯನ್ನು ನೀಡಲಾಗಿದೆ. ಇದೀಗ ನಮಗೂ ಮತ್ತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು ತನಿಖೆ ನಡೆಸಿ ವರದಿ ನೀಡಲಿದ್ದೇವೆ

- ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರು

----

ಕಳೆದ ಹಲವು ವರ್ಷಗಳ ಹಿಂದೆ ಬಸ್ ನಿಲ್ದಾಣ ಆಗಬೇಕು ಎಂಬ ಬೇಡಿಕೆಯಿತ್ತು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ೫ ಲಕ್ಷ ಅನುದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಒಂದು ವೇಳೆ ಬಸ್ ನಿಲ್ದಾಣ ತೆರವುಗೊಳಿಸಿದರೆ ಅಪಾರ ಜನರನ್ನು ಸೇರಿಸಿ ಬಸ್ ನಿಲ್ದಾಣ ಮುಟ್ಟದಂತೆ ತಡೆಯಲಾಗುವುದು. ಉಗ್ರ ಹೋರಾಟ ಮಾಡಿ ಬಸ್ ನಿಲ್ದಾಣ ಉಳಿಸಿಕೊಳ್ಳಲಾಗುವುದು

- ನಾಗೇಶ್ ಟಿ.ಎಸ್., ಸ್ಥಳೀಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣರು ನಮ್ಮನ್ನು ಗುಲಾಮ ಮಾಡಲು ಹಿಂದು ಧರ್ಮ ಹುಟ್ಟು ಹಾಕಿದ್ರು : ನಿವೃತ್ತ ಜಡ್ಜ್‌
ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ