ಮಧ್ಯಾಹ್ನ 2ಗಂಟೆಗೆ ಮೂರುಸಾವಿರ ಮಠದಿಂದ ನಗರದ ನೆಹರು ಮೈದಾನದ ವರೆಗೆ ಮಠಾಧೀಶರ ಪಾದಯಾತ್ರೆ ನಡೆಯಲಿದೆ. ಪಂಚಪೀಠಾಧೀಶರು, ಗುರುವಿರಕ್ತರು ಸೇರಿದಂತೆ ಎಲ್ಲ ಸ್ವಾಮೀಜಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ಸೆ.19 ರಂದು ನಡೆಯುವ ವೀರಶೈವ ಲಿಂಗಾಯತ ಏಕತಾ ಸಮಾವೇಶ ಸಕಲ ಸಿದ್ಧತೆ ನಡೆದಿದ್ದು, 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ತಮಿಳನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ 1 ಸಾವಿರ ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬರುವ ಸ್ವಾಮೀಜಿಗಳಿಗೆ ನಗರದ ಮೂರುಸಾವಿರ ಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಭಾಗವಹಿಸಿರುವ 50 ಸಾವಿರ ಜನರಿಗೆ ಮಧ್ಯಾಹ್ನ ಊಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮಧ್ಯಾಹ್ನ 2ಗಂಟೆಗೆ ಮೂರುಸಾವಿರ ಮಠದಿಂದ ನಗರದ ನೆಹರು ಮೈದಾನದ ವರೆಗೆ ಮಠಾಧೀಶರ ಪಾದಯಾತ್ರೆ ನಡೆಯಲಿದೆ. ಪಂಚಪೀಠಾಧೀಶರು, ಗುರುವಿರಕ್ತರು ಸೇರಿದಂತೆ ಎಲ್ಲ ಸ್ವಾಮೀಜಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಉಳಿದ ಸ್ವಾಮೀಜಿಗಳು ವೀರಶೈವ ಲಿಂಗಾಯತ ಒಂದು ಎಂದು ಒಪ್ಪಿಕೊಳ್ಳುವರಿಗೆ ಈ ಸುದ್ದಿಗೋಷ್ಠಿಯಿಂದ ಆಹ್ವಾನಿಸುತ್ತಿದ್ದು, ತಾವೆಲ್ಲರೂ ಬರಬೇಕು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಇತಿಹಾಸದಲ್ಲಿಯೇ ಒಂದು ಸಾವಿರ ಜನ ಸ್ವಾಮೀಜಿಗಳು ಭಾಗವಹಿಸುತ್ತಿರುವುದು ಬಹುಶಃ ಇದೆ ಮೊದಲಾಗಿದೆ. ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಂಚಪೀಠಾಧೀಶರ ಮೇಲಿನ ಸೇಡಿಗೆ ಸಮಾಜ ಬಲಿಕೊಡಬೇಡಿ: ಪಂಚಪೀಠಾಧೀಶರ ಮೇಲಿನ ಸೇಡು ತೀರಿಸಿಕೊಳ್ಳಲು ಸಮಾಜವನ್ನು ಬಲಿಕೊಡುವುದು ಸರಿಯಲ್ಲ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಪೀಠಾಧಿಪತಿಗಳು, ಬಸವತತ್ವ ಪಾಲಿಸುವವರು ಒಂದಾಗಬೇಕು ಎಂಬುದು ನಮ್ಮ ಆಶಯ. ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ. ಜಾಮದಾರ ಪಂಚಪೀಠಾಧೀಶರು ಬದಲಾಗಬೇಕು ಎಂಬ ಹೇಳಿಕೆ ನೀಡಿದ್ದು, ಸೇಡು ತಿರಿಸಿಕೊಳ್ಳುವಂತಿದೆ ಎಂದರು.
ಪ್ರತ್ಯೇಕ ಧರ್ಮ ಸ್ಥಾಪಿಸಲು ಅವರು ಹೊರಟಿವುದರಿಂದ ವೀರಶೈವ- ಲಿಂಗಾಯತ ಏಕತಾ ಸಮಾವೇಶ ಮಾಡಲಾಗುತ್ತಿದೆ. ಪಂಚಪೀಠಾಧೀಶರು, ವಿರಕ್ತ ಗುರುಗಳು, ಸ್ವಾಮೀಜಿಗಳು ಎಲ್ಲ ಪಕ್ಷ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ -ಲಿಂಗಾಯತರು ಏನು ಬರೆಯಿಸಬೇಕು ಎಂಬುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಧರಿಸಲಿದೆ. ಸ್ವಾಮೀಜಿಗಳು, ಮುಖಂಡರು ಹಾಗೂ ಜನರು ತಮ್ಮ ಅಭಿಪ್ರಾಯ ಮಹಾಸಭಾದ ಮುಂದೆ ವ್ಯಕ್ತಪಡಿಸಲು ಮಾತ್ರ ಅವಕಾಶವಿದೆ. ಅಂತಿಮ ನಿರ್ಣಯ ಮಹಾಸಭಾದಿಂದ ಆಗಲಿದೆ ಎಂದು ಸ್ಪಷ್ಟಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.