ಗದಗ: ತಾಲೂಕಿನಲ್ಲಿ ರೇಶನ್ ಕಾರ್ಡ್‌ಗೆ ಅರ್ಹರಿರುವ ಫಲಾನುಭವಿಗಳ ಸರ್ವೆ ಕಾರ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಜಂಟಿಯಾಗಿ ನಡೆಸುವಂತೆ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ರಾಜ್ಯ ಸರ್ಕಾರದಿಂದ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಒದಗಿಸುವಲ್ಲಿ ವಿಳಂಬವಾಗಬಾರದು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ದೊರಕುವಂತಾಗಬೇಕು. ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಶೇ. 100 ರಷ್ಟು ಸಾಧಿಸಲು ಸಂಬಂಧಿತ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಪ್ರಾಮಾಣಿಕತನವಿರಬೇಕು. ಪಾರದರ್ಶಕ ಆಡಳಿತ ನಡೆಸಿ ಅರ್ಹರು ಇದರ ಲಾಭ ಪಡೆಯುವಂತಾಗಬೇಕು. ಪಂಚ ಗ್ಯಾರಂಟಿ ಯೋಜನೆಯ ಮಹತ್ವ ಅರ್ಥೈಸಿಕೊಳ್ಳುವುದು ಹಾಗೂ ಅವುಗಳ ಪೂರ್ಣ ಪ್ರಮಾಣದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಸಂಬಂಧಿತ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪಂಚಗ್ಯಾರಂಟಿ ಯೋಜನೆ ಲಭಿಸುವಲ್ಲಿ ಫಲಾನುಭವಿಗಳಿಗೆ ಯಾವುದೇ ಅಡಚಣೆಗಳು ಉಂಟಾದರೆ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆದ್ದರಿಂದ ಪ್ರತಿ ಮೂರು ಪಂಚಾಯಿತಿ ಸೇರಿಸಿ ಜನಸ್ಪಂದನ ಸಭೆ ಮಾಡಲಾಗುವುದು ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಜೂನ್ 2025ರ ವರೆಗೆ ಗದಗ ತಾಲೂಕಿನಲ್ಲಿ ಯಜಮಾನಿ ಹೆಸರಿನಲ್ಲಿ ಒಟ್ಟು 81959 ಜನರು ಪಡಿತರ ಹೊಂದಿರುತ್ತಾರೆ. 80911 ಅರ್ಜಿಗಳು ನೋಂದಣಿಯಾಗಿದ್ದು, ಅದರಲ್ಲಿ 80447 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಶೇ. 99.42 ರಷ್ಟು ಪ್ರಗತಿ ಸಾಧಿಸಲಾಗಿದೆ.
ಆಗಸ್ಟ್ -2025 ಮಾಹೆಯಲ್ಲಿ (ಕೇಂದ್ರ ಸರ್ಕಾರ) ಎನ್‌ಎಫ್‌ಎಸ್‌ಎ ಅಕ್ಕಿ ಹಂಚಿಕೆಯಡಿ ಒಟ್ಟು 33558 ಕಾರ್ಡುಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುಗಳೂ) 2326.76 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ 31-8-2025ರ ವರೆಗೆ 2231 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ1761 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆಯಾಗಿರುತ್ತದೆ ಎಂದು ಸಂಬಂಧಿತ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಈ ವೇಳೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಸದಸ್ಯರಾದ ಈರಣ್ಣ ಹುನಸಿಕಟ್ಟಿ, ದಯಾನಂದ ಪವಾರ, ಶಂಭು ಕಾಳೆ, ಸಾವಿತ್ರಿ ಹೂಗಾರ, ಸಂಗು ಕೆರಕಲಕಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿಕಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್. ಬಾರಕೇರ, ತಾಪಂ ಇಒ ಮಲ್ಲಯ್ಯ.ಕೆ ಹಾಗೂ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿತ ಅಧಿಕಾರಿಗಳು ಇದ್ದರು.