ಲಕ್ಷ್ಮೇಶ್ವರ: ಪಂ. ಪುಟ್ಟರಾಜ ಕವಿ ಗವಾಯಿಗಳು ಜಗತ್ತಿನ ಕಲ್ಯಾಣಕ್ಕಾಗಿ ಬದುಕಿದವರು. ಅವರನ್ನು ಜಗತ್ತು ಸದಾ ಸ್ಮರಿಸುತ್ತದೆ ಎಂದು ನೀಲಗುಂದ ಗುದ್ನೇಶ್ವರ ಮಠದ ಶ್ರೀಪ್ರಭುಲಿಂಗ ದೇವರು ಹೇಳಿದರು.
ಹರ್ಲಾಪುರ ಕೊಟ್ಟೂರೇಶ್ವರ ಶ್ರೀಮಠದ ಶ್ರೀಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಯಳವತ್ತಿ ಗ್ರಾಮದಲ್ಲಿ ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮರಣೋತ್ಸವ ನೆಪದಲ್ಲಿ ಆಧ್ಯಾತ್ಮಿಕ ಚಿಂತನ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿ, ಪಂ.ಪುಟ್ಟರಾಜ ಗವಾಯಿಗಳು ಏನು ಇಲ್ಲದವರಿಗೆ ಎಲ್ಲವನ್ನು ಕೊಟ್ಟಿದ್ದಾರೆ. ಸಂಗೀತ, ಸಾಹಿತ್ಯ ಸೇರಿದಂತೆ ಸಮಗ್ರ ಕಲೆ ನಾಡಿಗೆ ನೀಡಿರುವ ಶ್ರೇಯಸ್ಸು ಗದುಗಿನ ಶ್ರೀವೀರೇಶ್ವರ ಪುಣ್ಯಾಶ್ರಮಕ್ಕಿದೆ ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವದು ಸೂಕ್ತವಾಗಿದೆ. ವೀರೇಶ್ವರ ಪುಣ್ಯಾಶ್ರಮದಲ್ಲಿ ಪ್ರತಿವರ್ಷ ಗುರುಗಳ ಪುಣ್ಯಸ್ಮರಣೋತ್ಸವ ನಡೆದುಕೊಂಡು ಬರುತ್ತಿದೆ. ಅದೇ ರೀತಿ ಗುರುಗಳ ಜೀವನ ದರ್ಶನ ಚಿಂತನೆ ಎಲ್ಲಿ ಹರಡುತ್ತದೆ ಆ ಕ್ಷೇತ್ರ ಪಾವನವಾಗುತ್ತದೆ. ಆದ್ದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಈ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಯಳವತ್ತಿ ಗ್ರಾಮದ ಜನರ ಸುಖ, ಶಾಂತಿ, ಸಮೃದ್ಧಿಗೆ ಗುರುಗಳ ಆಶೀರ್ವಾದ ಇರಲಿ ಎಂದರು.ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆಯ ಮಹಾಪೌರ ಜ್ಯೋತಿ ಪಾಟೀಲ ಮಾತನಾಡಿ, ಸಂತರ-ಶರಣರ ಪ್ರವಚನ ಆಲಿಸುವುದರಿಂದ ಒತ್ತಡದ ಜೀವನದಲ್ಲಿ ದಣಿದ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ, ಬಿತ್ತಿದ ಬೀಜ ಬೆಳೆ ಆಗುವಂತೆ ಪ್ರವಚನದ ಬೀಜ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನಾನು ಕೂಡ ಇದೇ ಗ್ರಾಮದ ಮೊಮ್ಮಗಳಾಗಿದ್ದು ಈ ಜನರ ಪ್ರೀತಿ ವಿಶ್ವಾಸವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗದುಗಿನ ಪಂ. ವೀರೇಶ ಕಿತ್ತೂರ, ಕೊಪ್ಪಳದ ಪಂ. ಸದಾಶಿವ ಪಾಟೀಲ ಹಾಗೂ ಬೆಂಗಳೂರಿನ ಪಂ. ನಾಗಲಿಂಗಯ್ಯ ಗವಾಯಿಗಳು ಅವರಿಗೆ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಗ್ರಾಪಂ ಅಧ್ಯಕ್ಷೆ ರೇಷ್ಮಾಬಾನು ಹಳೆಮನೆ, ಎಸ್.ಎಚ್. ಶಿವನಗೌಡ್ರ, ಮುದುಕಯ್ಯಸ್ವಾಮಿ ಹಿರೇಮಠ, ಉಮೇಶ ಹಡಪದ ಸೇರಿದಂತೆ ಮುಂತಾದವರು ಇದ್ದರು.