ಗದಗ: ಜಿಲ್ಲೆಯಲ್ಲಿ ಪ್ರಭುವಿನೆಡೆಗೆ ಪ್ರಭುತ್ವ ಎಂಬ ವಿನೂತನ ಕಾರ್ಯಕ್ರಮ ಆ.15 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಚಾಲನೆ ನೀಡಿದ್ದಾರೆ. ಪ್ರಭುವಿನೆಡೆಗೆ ಪ್ರಭುತ್ವದಲ್ಲಿ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ವಿಶಿಷ್ಟ ವಿನೂತನ ಕಾರ್ಯಕ್ರಮ ಪ್ರಭುವಿನೆಡೆಗೆ ಕಾರ್ಯಕ್ರಮವಾಗಿದೆ. ಜಿಲ್ಲಾ ಕ್ರೀಡಾಂಗಣ ಸೇರಿದಂತೆ ನಗರದಲ್ಲಿ ಮೂರು ಕಡೆ ಪ್ರ.ಪ್ರ.ಯಂತ್ರ ಅಳವಡಿಸಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆ ಈ ಯಂತ್ರದ ಮೂಲಕ ಬಟನ್ ಒತ್ತಿ ಹೇಳಿಕೊಳ್ಳುವ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಮೇಲ್ವಿಚಾರಣೆಗಾಗಿ ಈಗಾಗಲೇ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ಅವರನ್ನು ಕಾರ್ಯಕ್ರಮದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿಲಾಗಿದ್ದು, ಅವರು ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮದ ಮೇಲುಸ್ತುವಾರಿ ಮಾಡಲಿದ್ದಾರೆ. ಎಲ್ಲ ಇಲಾಖೆ ಅಧಿಕಾರಿಗಳು ಪ್ರ.ಪ್ರ ದಲ್ಲಿ ದಾಖಲಾದ ದೂರುಗಳಿಗೆ ಪರಿಹಾರ ನೀಡಿ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.ಪ್ರಭುವಿನಡೆಗೆ ಪ್ರಭುತ್ವ ಕಾರ್ಯಕ್ರಮ ಆರಂಭಿಕವಾಗಿ 10 ಅಂಶಗಳನ್ನು ಒಳಗೊಂಡಂತೆ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶ ಒದಗಿಸಲಾಗಿದೆ.
ಸಾರ್ವಜನಿಕರಿಂದ ಪ್ರ.ಪ್ರ ಯಂತ್ರಗಳ ಮೂಲಕ ಸ್ವೀಕೃತವಾದ ಸಮಸ್ಯೆ, ದೂರು ಪರಿಶೀಲಿಸಿ 7 ದಿನಗಳೊಳಗಾಗಿ ಪರಿಹಾರ ಸೂಚಿಸಬೇಕು. ದೂರುದಾರರಿಗೆ ಸ್ಪಷ್ಟ ಉತ್ತರ ನೀಡಬೇಕು. ಹಾರಿಕೆ ಉತ್ತರಕ್ಕೆ ಅವಕಾಶವಿಲ್ಲ. ದೂರಿಗೆ ಪರಿಹಾರ ಇಲ್ಲದಿದ್ದಲ್ಲಿ ಸಕಾರಣದೊಂದಿಗೆ ಉತ್ತರ ನೀಡುವುದು. ಮುಂದಿನ ದಿನಮಾನಗಳಲ್ಲಿ ಮಾಸಿಕವಾಗಿ ಪ್ರಗತಿ ನಡೆಸಲಾಗುವುದು. ಇಲಾಖಾ ಮುಖ್ಯಸ್ಥರೇ ಸಭೆಗೆ ಹಾಜರಾಗಬೇಕು. ಜತೆಗೆ ಜಿಲ್ಲಾ ನೋಡಲ್ ಅಧಿಕಾರಿಗೆ ಪ್ರಗತಿ ವರದಿ ಸಭೆಗೂ ಮುಂಚಿತವಾಗಿ ಸಲ್ಲಿಸಬೇಕು. ಈ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪ್ರ.ಪ್ರ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಪ್ರ.ಪ್ರ ಕಾರ್ಯಕ್ರಮ ಜಾರಿ ಆರಂಭದಿಂದ ಈವರೆಗೆ ಒಟ್ಟು 13 ಸಮಸ್ಯೆ, ದೂರು ದಾಖಲಾಗಿದ್ದು ಸಂಬಂಧಿತ ಇಲಾಖೆಗಳಿಗೆ ಪರಿಹಾರಕ್ಕೆ ಸೂಚಿಸಲಾಗಿದೆ. ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ನಗರಸಭೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಾರ್ವಜನಿಕರು ಸಮಸ್ಯೆ ತಿಳಿಸಿದ್ದು, ಶೀಘ್ರ ಪರಿಹಾರ ದೊರಕಿಸಿ ವರದಿ ನೀಡುವಂತೆ ತಿಳಿಸಿದರು.