ಮತ್ತೆ 1 ಟಿಎಂಸಿ ನೀರು: ಸಿಎಂ ಬಗ್ಗೆ ತೇಜಸ್ವಿ ಆಕ್ರೋಶ

KannadaprabhaNewsNetwork |  
Published : Nov 04, 2026, 12:30 AM IST
3ಕೆಡಿವಿಜಿ17, 18-ದಾವಣಗೆರೆಯಲ್ಲಿ ಮಂಗಳವಾರ ರೈತ ಮುಖಂಡ, ಐಸಿಸಿ ಸಮಿತಿ ಸದಸ್ಯ ತೇಜಸ್ವಿ ವಿ.ಪಟೇಲ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹಿರಿಯೂರಿಗೆ ಭೇಟಿಗೆ ಬರುವಂತೆ ಹೇಳಿ ರಾತ್ರೋರಾತ್ರಿ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಯ ವಾಣಿವಿಲಾಸಸಾಗರ ಜಲಾಶಯಕ್ಕೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸುತ್ತಿದ್ದಾರೆ. ಈ ನೀರನ್ನು 48 ಗಂಟೆ ಒಳಗಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ರೈತರು ಹೋರಾಟ ರೂಪಿಸುತ್ತೇವೆ ಎಂದು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸದಸ್ಯ, ರೈತ ಮುಖಂಡ ತೇಜಸ್ವಿ ವಿ. ಪಟೇಲ್‌ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

- 48 ಗಂಟೆಯೊಳಗೆ ಭದ್ರಾ ಮೇಲ್ದಂಡೆ ಕಾಲುವೆಗೆ ನೀರು ನಿಲ್ಲಿಸಿ: ದಾವಣಗೆರೆ ಅಚ್ಚುಕಟ್ಟು ರೈತರ ತಾಕೀತು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿರಿಯೂರಿಗೆ ಭೇಟಿಗೆ ಬರುವಂತೆ ಹೇಳಿ ರಾತ್ರೋರಾತ್ರಿ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಯ ವಾಣಿವಿಲಾಸಸಾಗರ ಜಲಾಶಯಕ್ಕೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸುತ್ತಿದ್ದಾರೆ. ಈ ನೀರನ್ನು 48 ಗಂಟೆ ಒಳಗಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ರೈತರು ಹೋರಾಟ ರೂಪಿಸುತ್ತೇವೆ ಎಂದು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸದಸ್ಯ, ರೈತ ಮುಖಂಡ ತೇಜಸ್ವಿ ವಿ. ಪಟೇಲ್‌ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆಗೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಭದ್ರಾ ಡ್ಯಾಂ ಅಚ್ಚುಕಟ್ಟು ಜಿಲ್ಲೆಗಳಾದ ದಾವಣಗೆರೆ, ಶಿವಮೊಗ್ಗ ಹಾಗೂ ಹರಪನಹಳ್ಳಿ ತಾಲೂಕಿನ ರೈತರನ್ನು ಒಳಗೊಂಡಂತೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನಿನ್ನೆಯಷ್ಟೇ ಪ್ರತಿಭಟನೆ ವೇಳೆ ಕೊಟ್ಟ ಮಾತನ್ನೇ ತಪ್ಪಿದ್ದಾರೆ. ಇವತ್ತು (ಮಂಗಳವಾರ) ಹಿರಿಯೂರಿನಲ್ಲಿ ಭೇಟಿಗೆ ಬನ್ನಿ, ನ್ಯಾಯ ಕೊಡುತ್ತೇನೆಂದು ಹೇಳಿದ್ದ ಡಿ.ಕೆ.ಶಿವಕುಮಾರ ರಾತ್ರೋರಾತ್ರಿ ವಾಣಿವಿಲಾಸ ಸಾಗರಕ್ಕೆ 1 ಟಿಎಂಸಿ ಹೆಚ್ಚುವರಿ ನೀರು ಬಿಡಿಸಿದ್ದಾರೆ. ಭದ್ರಾ ಡ್ಯಾಂನಿಂದ ನಿನ್ನೆಯಿಂದಲೇ ನೀರು ಹರಿಸಲಾಗುತ್ತಿದೆ. ಸಿಎಂ ಭೇಟಿಗೆ ಹೋಗೋಣವೆಂದಿದ್ದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ ಏಕಾಏಕಿ ಭುಜದ ನೋವು ಕಾಣಿಸಿದೆ. ಈ ನೋವಿಗೆ ಬೇಸರವಾಯಿತು. ಜೊತೆಗೆ ರೈತರಿಗೆ ಸಂಶಯವೂ ಇದೆ ಎಂದು ಹೇಳಿದರು.

ರೈತರ ಭೇಟಿ ತಪ್ಪಿಸಲೆಂದೇ ಡಿ.ಕೆ.ಶಿವಕುಮಾರ, ಎಸ್‌.ಎಸ್‌. ಮಲ್ಲಿಕಾರ್ಜುನ ಹೀಗೆ ಮಾಡಿದ್ದಾರೆಂಬ ಅನುಮಾನವಿದೆ. ಹಿರಿಯೂರು ಉಪ ಚುನಾವಣೆ ಹಿನ್ನೆಲೆ ರಾತ್ರೋರಾತ್ರಿ ಭದ್ರಾ ಮೇಲ್ದಂಡೆಗೆ ಸಿಎಂ ನೀರು ಹರಿಸುತ್ತಿದ್ದಾರೆ. ಹಿರಿಯೂರಿನ ಮತದಾರರಿಗೆ ನೀರಿನ ಆಮಿಷವೊಡ್ಡುತ್ತಿರುವುದು ದುರಂತ. ದಾವಣಗೆರೆ ರೈತರಿಗೆ ಕೊಟ್ಟ ಮಾತಿಗೆ ಡಿಕೆಶಿ ತಪ್ಪಿದ್ದಾರೆ. ರೈತರ ವಿಚಾರದಲ್ಲಿ ಬದ್ಧರಾಗಿ ನಿಲ್ಲಬೇಕಿದ್ದ ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ ಎಂದು ಅವರು ಕಿಡಿಕಾರಿದರು.

ದಾವಣಗೆರೆ ಭಾಗದಲ್ಲಿ ಜಿಪಂ, ತಾಪಂ ಚುನಾವಣೆಗೆ ನಿಲ್ಲುವವರ ಮೇಲೂ ಸಿಎಂ ಡಿಕೆಶಿ ವರ್ತನೆಯಿಂದ ಪರಿಣಾಮ ಬೀರುತ್ತದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸುವವರು ಇದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಕಾಂಗ್ರೆಸ್ ನಾಯಕರಿಗೆ ತಿಳಿಹೇಳಿ. ಹಿರಿಯೂರು ಉಪ ಚುನಾವಣೆಯಲ್ಲಿ ಮತ ತಂದು ಕೊಡುವ ಅದೇ ಭದ್ರಾ ನೀರು ದಾವಣಗೆರೆ ಭಾಗದಲ್ಲಿ ಕಾಂಗ್ರೆಸ್‌ ಪಕ್ಷದ ಮತಗಳನ್ನೇ ಕಳೆಯಲಿದೆ ಎಂಬುದನ್ನೂ ನಿಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗಮನಕ್ಕೆ ತನ್ನಿ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಗುರುವಾರದವೆರೆಗೂ ಕಾದು ನೋಡುತ್ತೇವೆ. ಹಿರಿಯೂರಿಗೆ ಸಿಎಂ ಭೇಟಿಗೆ ತೆರಳಲೆಂದು ಇವತ್ತು ಬೆಳಗ್ಗೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನಿವಾಸಕ್ಕೆ ಹೋಗಿ 2 ಗಂಟೆ ಕಾದು ಕುಳಿತಿದ್ದೆ. ಸಚಿವರ ಭುಜದ ನೋವು ಕಡಿಮೆಯಾಗಲಿ. ಫೋನ್ ಮಾಡಿದರೂ ಸಚಿವರು ಕರೆ ಸ್ವೀಕರಿಸಲಿಲ್ಲ. ಪದೇಪದೇ ಫೋನ್ ಮಾಡಿದ್ದಕ್ಕೆ ಮಂತ್ರಿಗಳ ಆಪ್ತ ಸಹಾಯಕ ಬಂದು ಭುಜದ ನೋವಂತೆ ಎಂದು ಹೇಳಿದರು. ರೈತರ ಪ್ರತಿಭಟನೆ ಹತ್ತಿಕ್ಕಲು ಸಿಎಂ, ಸಚಿವರು ಹೀಗೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಗಂಗಾಧರ, ವಿರೂಪಾಕ್ಷಪ್ಪ, ಅಲ್ಲಮ ಪ್ರಭುಸ್ವಾಮಿ, ನಾಗರಾಜ, ತಿಪ್ಪೇಸ್ವಾಮಿ ಇತರರು ಇದ್ದರು.

- - -

(ಬಾಕ್ಸ್‌)

* ಹಣ, ಹೆಂಡದ್ದಾಯ್ತು, ಈಗ ನೀರು ಹರಿಸಿ ರಾಜಕೀಯ ಲಾಭ

ದಾವಣಗೆರೆ: ಚುನಾವಣೆಗಳನ್ನು ಇದುವರೆಗೂ ಹಣ, ಹೆಂಡ ಹಂಚಿ ಎದುರಿಸಿದ್ದನ್ನು ನೋಡಿದ್ದೇವೆ. ಈಗ ನೀರು ಹರಿಸಿ, ರಾಜಕೀಯ ಲಾಭ ಪಡೆಯುವಂತಹ ಸ್ಥಿತಿ ನಿರ್ಮಾಣ ಆಗಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಹೇಳಿದರು.

ಬೇಸಿಗೆ ಅಗತ್ಯಕ್ಕೆ ಭದ್ರಾ ಡ್ಯಾಂನಲ್ಲಿ ನೀರು ಉಳಿಸಿಕೊಳ್ಳಲು ಐಸಿಸಿ ಸಭೆ ತೀರ್ಮಾನಿಸುತ್ತದೆ. ಈಗ ಡ್ಯಾಂ ನೀರು ಉಪ ಚುನಾವಣೆ ರಾಜಕಾರಣಕ್ಕೆ ಬಳಕೆ ಆಗುತ್ತಿರುವುದಕ್ಕೆ ಬೇಸರವಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸರ್ಕಾರ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರನ್ನು ಬಲಿ ಕೊಡಲು ಹೊರಟಿದೆ. ಜಿಲ್ಲೆಯ ರೈತರ ಪರವಾಗಿ ಧ್ವನಿ ಎತ್ತಬೇಕಾಗಿದ್ದ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.

- - -

-3ಕೆಡಿವಿಜಿ18: ದಾವಣಗೆರೆಯಲ್ಲಿ ಮಂಗಳವಾರ ರೈತ ಮುಖಂಡ, ಐಸಿಸಿ ಸಮಿತಿ ಸದಸ್ಯ ತೇಜಸ್ವಿ ವಿ. ಪಟೇಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌