1 ಟ್ರಿಲಿಯನ್‌ ಜಿಡಿಪಿ ಗುರಿ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Jun 20, 2024, 01:01 AM ISTUpdated : Jun 20, 2024, 11:37 AM IST
Invest Karnataka (9) | Kannada Prabha

ಸಾರಾಂಶ

ರಾಜ್ಯದ ಜಿಡಿಪಿಯನ್ನು 2032ರ ಹೊತ್ತಿಗೆ 1 ಟ್ರಿಲಿಯನ್‌ಗೆ ಕೊಂಡೊಯ್ಯುವ ಗುರಿ ಸಾಧಿಸಲು ವಾರ್ಷಿಕ ಶೇ. 15ರಿಂದ 16ರಷ್ಟು ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಂಗಳೂರು :   ರಾಜ್ಯದ ಜಿಡಿಪಿಯನ್ನು 2032ರ ಹೊತ್ತಿಗೆ 1 ಟ್ರಿಲಿಯನ್‌ಗೆ ಕೊಂಡೊಯ್ಯುವ ಗುರಿ ಸಾಧಿಸಲು ವಾರ್ಷಿಕ ಶೇ. 15ರಿಂದ 16ರಷ್ಟು ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನ ಅರಮನೆಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಮಹಾನಗರ ಜತೆಗೆ ಗ್ರಾಮೀಣ ಭಾಗ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸಾಧಿಸಲು ಪಣ ತೊಟ್ಟಿದೆ. ಅದಕ್ಕಾಗಿ ರಾಜ್ಯದ ಎಲ್ಲ ಭಾಗಗಳಲ್ಲೂ ಕೈಗಾರಿಕಾ ಕ್ಲಸ್ಟರ್‌ಗಳನ್ನು ಬೆಳೆಸಲು ತೀರ್ಮಾನಿಸಲಾಗಿದೆ. ಮಹಾನಗರಗಳ ಆಚೆಗೂ ಆರ್ಥಿಕ ಪ್ರಗತಿ ಸಾಧಿಸುವ ಸಂಕಲ್ಪವನ್ನು ಹೊಂದಿದ್ದೇವೆ. ಅಲ್ಲದೆ 2032ರ ವೇಳೆಗೆ 1 ಟ್ರಿಲಿಯನ್‌ ಜಿಡಿಪಿ ಹೊಂದುವ ಸಲುವಾಗಿ ಪ್ರತಿ ವರ್ಷ ಶೇ. 15ರಿಂದ 16ರಷ್ಟು ಕೈಗಾರಿಕಾ ಬೆಳವಣಿಗೆ ಸಾಧಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.

ಸ್ಥಳೀಯ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ವಿಶೇಷ ಪರಿಣಿತ ಉದ್ದಿಮೆ ಬೆಳೆಸಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಎಲೆಕ್ಟ್ರಾನಿಕ್ಸ್‌, ಆಟೋ ಮತ್ತು ಜವಳಿ ಸೇರಿದಂತೆ ಎಲ್ಲ ವಲಯಗಳಿಗೂ ಆದ್ಯತೆ ನೀಡಲಾಗುತ್ತಿದೆ. ಹೆಚ್ಚು ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ತಂತ್ರಜ್ಞಾನ, ಸುಸ್ಥಿರ ಮತ್ತು ಸಮತೋಲನ ಆಧರಿತ ಆರ್ಥಿಕ ಬೆಳವಣಿಗೆಯನ್ನು ಮರುಸ್ಥಾಪಿಸುವ ಉದ್ದೇಶದೊಂದಿಗೆ ಹೂಡಿಕೆ ಕರ್ನಾಟಕ 2025 ಆಯೋಜಿಸಲಾಗುತ್ತಿದೆ. ಸಣ್ಣ ಕೈಗಾರಿಕೆಗಳು, ನವೋದ್ಯಮಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದು ತಿಳಿಸಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮಾತನಾಡಿ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜತೆಗೆ ಕಳೆದ ಬಾರಿಯಂತೆ ನವೋದ್ಯಮಗಳಿಗೆ ಹೆಚ್ಚಿನ ಬಂಡವಾಳ ಸೆಳೆಯಲು ವಿಶೇಷ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಎಸ್ಎಂಇ ಕನೆಕ್ಟ್- 25 ಮತ್ತು ವೆಂಚರೈಸ್- 24 ಪರಿಕಲ್ಪನೆಗಳನ್ನು ರೂಪಿಸಲಾಗಿದೆ ಎಂದರು.

ಬೆಳವಣಿಗೆಯ ಹೊಸ ಪರಿಕಲ್ಪನೆ ಧ್ಯೇಯದೊಂದಿಗೆ ಈ ಬಾರಿ ಸಮಾವೇಶ ನಡೆಯಲಿದೆ. ತಯಾರಿಕಾ ವಲಯ, ಮೂಲಸೌಕರ್ಯ ಅಭಿವೃದ್ಧಿ, ಇಂಧನ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಸಮಾವೇಶಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ರೋಡ್‌ ಶೋಗಳನ್ನು ಮಾಡಲಾಗುತ್ತಿದೆ. ಜೂ. 24ರಿಂದ 28ರವರೆಗೆ ಜಪಾನಿನ ಟೋಕಿಯೋ, ನಗೋಯ ಮತ್ತು ಒಸಾಕ ನಗರಗಳಲ್ಲಿ ಹಾಗೂ ಜುಲೈ ಮೊದಲ ವಾರದಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‌, ಇಂಚೆಯಾನ್‌ ಮತ್ತು ಜಿಯಾಂಗಿ ನಗರಗಳಿಗೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು.

ಸಚಿವರಾದ ಶರಣಬಸಪ್ಪ ದರ್ಶನಾಪುರ, ಡಾ. ಶರಣಪ್ರಕಾಶ ಪಾಟೀಲ್, ದಿನೇಶ್ ಗುಂಡೂರಾವ್‌, ಶಿವಾನಂದ ಪಾಟೀಲ್‌, ಡಾ.ಎಂ.ಸಿ.ಸುಧಾಕರ, ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಇತರರಿದ್ದರು.

ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಮುಖ ಅಂಶಗಳು

* ಫೆ. 12, 13, 14ರಂದು ಬೆಂಗಳೂರು ಅರಮನೆಯಲ್ಲಿ ಆಯೋಜನೆ* ಬೆಳವಣಿಗೆಯ ಮರುರೂಪಿಸುವ ಪರಿಕಲ್ಪನೆಯಲ್ಲಿ ನಡೆಯಲಿರುವ ಸಮಾವೇಶ

* ಇದೇ ಮೊದಲ ಬಾರಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬಂಡವಾಳ ಆಕರ್ಷಿಸಲು ಎಸ್‌ಎಂಇ ಸಂಪರ್ಕ 25 ಆಯೋಜನೆ

* ನವೋದ್ಯಮಗಳಿಗಾಗಿ ವೆಂಚುರೈಸ್‌ 2ನೇ ಆವೃತ್ತಿ ಆಯೋಜನೆ * ಅಮೆರಿಕಾ, ಜರ್ಮನಿ, ಜಪಾನ್‌, ಫ್ರಾನ್ಸ್‌ ಸೇರಿದಂತೆ 18 ದೇಶಗಳ ಗಣ್ಯರು, ಹೂಡಿಕೆದಾರರು ಭಾಗಿ

* 30ಕ್ಕೂ ಹೆಚ್ಚಿನ ತಂತ್ರಜ್ಞಾನ ಉಪನ್ಯಾಸಗಳು

* 100ಕ್ಕೂ ಹೆಚ್ಚಿನ ಉಪನ್ಯಾಸಕರು ಭಾಗಿ

* 5 ಸಾವಿರಕ್ಕೂ ಹೆಚ್ಚಿನ ಗಣ್ಯರು ಮತ್ತು ಪ್ರದರ್ಶಕರು ಭಾಗಿ

* ವಿಮಾನಯಾನ, ರಕ್ಷಣೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಭವಿಷ್ಯದ ಆವಿಷ್ಕಾರಕ್ಕೆ ಒತ್ತು

* ರಾಜ್ಯದ ಉತ್ಪಾದನಾ ವಲಯದ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ