ಕೈಗಾರಿಕೆಯಿಂದ 10 ಸಾವಿರ ಉದ್ಯೋಗ ಸೃಷ್ಟಿ : ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ

KannadaprabhaNewsNetwork | Updated : Mar 04 2025, 11:43 AM IST

ಸಾರಾಂಶ

 ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಕನಿಷ್ಠ 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲು ಕಾರ್ಯೋನ್ಮುಖರಾಗಿದ್ದಾಗಿ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

  ವಿಜಯಪುರ : ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಕನಿಷ್ಠ 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲು ಕಾರ್ಯೋನ್ಮುಖರಾಗಿದ್ದಾಗಿ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಹೊನವಾಡ ಮತ್ತು ಘೋಣಸಗಿಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹೊನವಾಡದಲ್ಲಿ ಕೆ.ಎನ್.ಎನ್.ಎಲ್‌ನಿಂದ ₹1 ಕೋಟಿ ವೆಚ್ಚದಲ್ಲಿ ಹೊನವಾಡ- ಕನಮಡಿ ರಸ್ತೆ ಹಾಗೂ ಹೊನವಾಡ- ಬಿಜ್ಜರಗಿ ಹಾಗೂ ಪಿ.ಆರ್.ಡಿ ಇಲಾಖೆಯಿಂದ ಹೊನವಾಡ-ಬಾಬಾನಗರ ರಸ್ತೆ ದುರಸ್ತಿ ಕಾಮಗಾರಿಗೆ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 

ಬರದ ನಾಡಾಗಿದ್ದ ಹೊನವಾಡ ಭಾಗದಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ಕೈಗೊಂಡ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದಾಗಿ ಈ ಭಾಗದಲ್ಲಿ ರೈತರು ಕೋಟ್ಯಂತರ ರೂಪಾಯಿ ಕಬ್ಬು ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಗ್ರಾಮದೇವತೆ ಬನಶಂಕರಿ ಆಶೀರ್ವಾದದಿಂದಾಗಿ ಇನ್ನೂ ಹೆಚ್ಚೆಚ್ಚು ಕಲಸ ಮಾಡಲು ಶಕ್ತಿ ಸಿಕ್ಕಿದೆ. ಗ್ರಾಮದಲ್ಲಿ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಸೂಚನೆ ನೀಡಿದ್ದೇನೆ. ಇಲ್ಲಿನ ಎಲ್ಲ ಶಾಲೆಗಳನ್ನು ಸಿ.ಎಸ್.ಆರ್ ಅನುದಾನದಲ್ಲಿ ಕಾನ್ವೆಂಟ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಘೊಣಸಗಿ ಗ್ರಾಮದ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನ ಹತ್ತಿರದ ಅಳಗಿನಾಳ-ಗುಡ್ಡಾಪುರ ಗಡಿವರೆಗೆ ರಸ್ತೆ ಮತ್ತು ಸಿಡಿ ಕಾಮಗಾರಿಗಳಿಗೆ ಹಾಗೂ ಘೋಣಸಗಿ ಮುಖ್ಯರಸ್ತೆಯಿಂದ ಹುಬನೂರ ಮಹಾರಾಷ್ಟ್ರ ಗಡಿಯವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕೈಗಾರಿಕೆ ಸಚಿವನಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ಸುಮಾರು ₹ 1 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿ ಜಿಲ್ಲೆಯ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿಯೇ ಪಾಪಕಾನ್ಸ್ ಕಂಪನಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಿರುವ ಸಚಿವ ಎಂ.ಬಿ.ಪಾಟೀಲ ಅವರು, ಮತಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದಾರೆ. ನೀರಾವರಿ ಮೂಲಕ ಜನರ ಬಾಳನ್ನು ಹಸನಾಗಿಸಿದ್ದಾರೆ. ಅವರ ಕೆಲಸ ಕಾರ್ಯಗಳನ್ನು ನಾವು ಮರೆಯಬಾರದು ಎಂದು ಹೇಳಿದರು.

ಮುಖಂಡ ಯಾಕೂಬ್ ಜತ್ತಿ ಮಾತನಾಡಿ, ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ನಮಗೆ ಸಚಿವ ಎಂ.ಬಿ.ಪಾಟೀಲ ಅವರು ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ನೀರಿನ ಬವಣೆ ತಪ್ಪಿದೆ. ರೈತರು ಗುಳೆ ಹೋಗುವುದು ನಿಂತಿದೆ. ಜಮೀನಿಗೆ ನೀರು ಬಂದಿದ್ದು, ರೈತರು ಕಬ್ಬು ಬೆಳೆಯುತ್ತಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂರಾದ ಸೋಮನಾಥ ಬಾಗಲಕೋಟ, ಜಕ್ಕಪ್ಪ ಯಡವೆ, ರಾಮಣ್ಣ ಮೆಂಡೆಗಾರ, ಎಂ.ಬಿ.ಹೊಸಮನಿ, ಸಿದ್ದಗೊಂಡ ರುದ್ರಗೌಡರ, ತುಕಾರಾಮ ಧಡಕೆ, ವಿಜಯಕುಮಾರ ಹಿರೇಮಠ, ರಾಮಗೊಂಡ ಚಾವರ, ಆರ್.ಜಿ.ಯರನಾಳ, ಗುರು ಮಾಳಿ, ರಾಜುಗೌಡ ಬಿರಾದಾರ, ಅಪ್ಪು ಬಗಲಿ, ಮಲ್ಲು ಎಬ್ಬೆ, ಟಿ.ಎಂ.ಪಾಟೀಲ, ಅಂಜನಾ ಪವಾರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಮುಂತಾದವರು ಉಪಸ್ಥಿತರಿದ್ದರು. 

ಘೊಣಸಗಿ, ಕಳ್ಳಕವಟಗಿ, ಅಳಗಿನಾಳ ಗ್ರಾಮಗಳಿಗೆ ಯೋಜನಾಬದ್ಧವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷದಿಂದ ಮೊದಲಿಗೆ ಟಿಲ್ ಎಂಡ್ ನಿಂದ ಪ್ರಾರಂಭಿಸಿ ನಂತರ ಉಳಿದೆಡೆಗೆ ನೀರು ಹರಿಸಲಾಗುವುದು. ಉಳಿದ ಭಾಗಕ್ಕೂ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಘೊಣಸಗಿ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು 110 ಕೆ.ವಿ ವಿದ್ಯುತ್ ಸ್ಟೇಷನ್ ಮಂಜೂರ ಮಾಡಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ದೇವರು ನಮಗೆ ಕೊಟ್ಟಿದ್ದನ್ನು ನಿಮಗೆ ನೀಡಿದ್ದೇನೆ.

- ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ

Share this article