ಕೆಂಪೇಗೌಡರ ಮ್ಯೂಸಿಯಂಗೆ 10 ಎಕರೆ ಜಮೀನು

KannadaprabhaNewsNetwork |  
Published : Jun 30, 2024, 12:47 AM IST
ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು. | Kannada Prabha

ಸಾರಾಂಶ

ದೇವನಹಳ್ಳಿ: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಬೆಂ.ಗ್ರಾ. ಜಿಲ್ಲೆಯ ಆವತಿ ಗ್ರಾಮದ ಬಳಿ ಸರ್ಕಾರದಿಂದ 0 ಎಕರೆ ಜಮೀನು ಮಂಜೂರು ಆಗಿದ್ದು, ಕೆಂಪೇಗೌಡರ ಜೀವನ ಚರಿತ್ರೆ, ತ್ಯಾಗ, ಹೋರಾಟ, ಸಮಾಜ ಸೇವೆಗಳ ಸಮಗ್ರ ಇತಿಹಾಸವನ್ನು ತಿಳಿಸುವ ಸಲುವಾಗಿ ಅವರ ನೆನಪಿನಲ್ಲಿ ಸ್ಮಾರಕ, ಸಂಗ್ರಹಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.

ದೇವನಹಳ್ಳಿ: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಬೆಂ.ಗ್ರಾ. ಜಿಲ್ಲೆಯ ಆವತಿ ಗ್ರಾಮದ ಬಳಿ ಸರ್ಕಾರದಿಂದ 0 ಎಕರೆ ಜಮೀನು ಮಂಜೂರು ಆಗಿದ್ದು, ಕೆಂಪೇಗೌಡರ ಜೀವನ ಚರಿತ್ರೆ, ತ್ಯಾಗ, ಹೋರಾಟ, ಸಮಾಜ ಸೇವೆಗಳ ಸಮಗ್ರ ಇತಿಹಾಸವನ್ನು ತಿಳಿಸುವ ಸಲುವಾಗಿ ಅವರ ನೆನಪಿನಲ್ಲಿ ಸ್ಮಾರಕ, ಸಂಗ್ರಹಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಬೆಂ.ಗ್ರಾ. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಾಡಪ್ರಭು ಶ್ರೀ ಕೆಂಪೇಗೌಡರ 515 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ನಗರ ವಿಶ್ವದಲ್ಲಿ ಹೆಸರು ಮಾಡಲು

ಸಹಕಾರಿಯಾಗಿದೆ. ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತವಲ್ಲ, ಇಡೀ ರಾಜ್ಯದ ಜನರ ಆಸ್ತಿ. ಅವರ ಮೂಲಸ್ಥಾನವಾದ ದೇವನಹಳ್ಳಿಯ ಆವತಿ ಗ್ರಾಮದ ವ್ಯಾಪ್ತಿಯಲ್ಲಿ 10 ಎಕರೆ ಭೂಮಿ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಕೆಂಪೇಗೌಡರ ತತ್ವ-ಸಿದ್ಧಾಂತಗಳು ಹಾಗೂ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ

ಅಳವಡಿಸಿಕೊಳ್ಳಬೇಕು. ಕೆಂಪೇಗೌಡರ ಅಭಿವೃದ್ಧಿಯ ದೂರದೃಷ್ಟಿಯಂತೆ ನಮ್ಮ ಗ್ರಾಮಾಂತರ ಜಿಲ್ಲೆಯಲ್ಲಿಯೂ ಕೂಡ ಕೆರೆಗಳ ಅಭಿವೃದ್ಧಿ, ಶಾಲೆಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ದೇವಸ್ಥಾನಗಳ ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ ಸಿ.ಎಸ್.ಆರ್ ಅನುದಾನದಡಿ ಶಾಲೆಗಳ ನವೀಕರಣ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಯ ಶಾಲೆಯನ್ನು ಗುಣಮಟ್ಟದ ಶಿಕ್ಷಣದೊಂದಿಗೆ ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದರು.

ದೂರದೃಷ್ಟಿ ಹೊಂದಿದ್ದ ನಾಯಕ:

ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ನಾರಾಯಣಸ್ವಾಮಿ ಮಾತನಾಡಿ, ನಾಡಪ್ರಭು

ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಎಲ್ಲಾ ಸಮುದಾಯದವರನ್ನು ಗೌರವದಿಂದ ಕಾಣುತ್ತಿದ್ದರು. ಬೆಂಗಳೂರಿನಲ್ಲಿ ಹಲವು ಕುಲ ಕಸುಬುಗಳನ್ನು ಪರಿಚಯಿಸಿ, ಹಲವರಿಗೆ ಉದ್ಯೋಗ ಸೃಷ್ಟಿಸಿ ಆಡಳಿತ ವೈಖರಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರು. ಬೆಂಗಳೂರು ಇಂದು ತಂತ್ರಜ್ಞಾನ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ ಎಂದು ಹೇಳಿದರು.

ಉತ್ತಮ ಆಡಳಿಗಾರ:

ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಉತ್ತಮ ಆಡಳಿತ, ಸಮಾಜ ಸೇವಾ ಗುಣ, ಜೀವನಾದರ್ಶವನ್ನು ನಾವೆಲ್ಲರೂ ರೂಡಿಸಿಕೊಳ್ಳುವ ಜತೆಯಲ್ಲಿ ನಮ್ಮೆಲ್ಲರ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗುತ್ತಿದೆ. ಮುಂದಿನ ನೂರಾರು ವರ್ಷಗಳ ದೂರದೃಷ್ಟಿಯನ್ನು ಇಟ್ಟುಕೊಂಡು ನೂರಾರು ಕೆರೆಗಳು-ಕಾಲುವೆ, ಪೇಟೆಗಳನ್ನು ನಿರ್ಮಿಸಿ, ಜನರ ಜೀವನವನ್ನು ರೂಪಿಸಿಕೊಳ್ಳಲು ಬೆಂಗಳೂರು ಮಹಾನಗರವನ್ನು ಕಟ್ಟಿದರು. ಇಂದು ಲಕ್ಷಾಂತರ ಜನರ ಹೊಟ್ಟೆ-ಬಟ್ಟೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎನ್ ಕೃಷ್ಣಪ್ಪ, ಬೆಂಗಳೂರು ನಿರ್ಮಾತೃ

ಕೆಂಪೇಗೌಡರ ಸಮಗ್ರ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಕೆಂಪೇಗೌಡರ ಕುರಿತು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಣ್ಣ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ.ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಉಪ ವಿಭಾಗಾಧಿಕಾರಿ ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್,

ದೊಡ್ಡಬಳ್ಳಾಪುರ ವಿಭಾಗದ ಡಿವೈಎಸ್ಪಿ ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರಾದ ಕೆ.ಸಿ ವೆಂಕಟೇಗೌಡ, ಬಿ.ಮುನೇಗೌಡ ಮತ್ತಿತರರು ಉಪಸ್ಥಿತರಿದ್ದರು.

29ಕೆಡಿಬಿಪಿ1-

ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್