ಕನ್ನಡಪ್ರಭ ವಾರ್ತೆ ಬೇತಮಂಗಲರಾಜ್ಯದ ಗಡಿ ಭಾಗದಲ್ಲಿ ೨೫ ಎಕರೆ ಜಾಗದಲ್ಲಿ ನಿರ್ಮಾಣ ಮಾಡುತ್ತಿರುವ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಗೆ ೧೦ ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.ಎನ್.ಜಿ. ಹುಲ್ಕೂರು ಗ್ರಾಪಂ ವ್ಯಾಪ್ತಿಯ ಸುಣ್ಣಕುಪ್ಪ ಕ್ರಾಸ್‌ನಲ್ಲಿ ಸುಮಾರು ೨೫ ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಎಪಿಎಂಸಿ ಮಾರುಕಟ್ಟೆ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಸೌಲಭ್ಯ ಕಲ್ಪಿಸಲು ₹10 ಕೋಟಿ
ಎಪಿಎಂಸಿಗೆ 6 ಗೇಟು ೨೫ ಎಕರೆ ಪ್ರದೇಶದ ಎಪಿಎಂಸಿ ಮಾರುಕಟ್ಟೆಗೆ ಒಟ್ಟು ಆರು ಜಾಗದಲ್ಲಿ ಬೃಹತ್ ಗೇಟ್‌ಗಳ ಮೂಲಕ ಪ್ರವೇಶ ನೀಡಲಾಗುತ್ತದೆ, ಮಾರುಕಟ್ಟೆಯ ಸುತ್ತ ಬೃಹತ್ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು. ಮಾರುಕಟ್ಟೆಯ ಸುತ್ತಲಿನ ರೈತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಸುಮಾರು ೧೫ ರಿಂದ ೨೦ ಅಡಿಗಳ ರಸ್ತೆ ಗುರುತಿಸಲು ಕೆಜಿಎಫ್ ತಹಸೀಲ್ದಾರ್ ಭರತ್‌ರಿಗೆ ತಿಳಿಸಿದರು.
ಕರ್ನಾಟಕ ರಾಜ್ಯದ ಜಾಗವನ್ನು ಅಕ್ರಮವಾಗಿ ಒತ್ತುವರೇ ಮಾಡಿಕೊಂಡಿರುವ ಆಂಧ್ರದವರಿಗೆ ಯಾವುದೇ ಕಾರಣಕ್ಕು ಒಂದು ಅಡಿ ಜಾಗವನ್ನು ಸಹ ಬಿಡುವ ಪ್ರಶ್ನೆಯೇ ಇಲ್ಲ, ಶೀಘ್ರವಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ಒತ್ತುವರಿ ತೆರವು ಮಾಡುವ ಮೂಲಕ ರಾಜ್ಯದ ಜಾಗ ಉಳಿಸಲು ಸೂಚಿಸಿದರು.ಆಂಧ್ರ ಪ್ರಭಾವಿಗಳಿಂದ ಒತ್ತುವರಿ
ಕರ್ನಾಟಕ ಹಾಗೂ ಆಂಧ್ರ ಗಡಿಭಾಗದಲ್ಲಿ ನೂರಾರು ಎಕರೆ ಜಾಗವನ್ನು ಆಂಧ್ರಪ್ರದೇಶದ ಪ್ರಭಾವಿಗಳು ಹಾಗೂ ಭೂಮಾಪಯಗಳು ಒತ್ತುವರಿ ಮಾಡಿಕೊಂಡು ಕರ್ನಾಟಕದ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ, ಆದರೆ ಯಾವುದೇ ಕಾರಣಕ್ಕೂ ರಾಜ್ಯದ ಜಾಗವನ್ನು ಆಂಧ್ರದವರಿಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವಿಜಯ ರಾಘವ್‌ರೆಡ್ಡಿ, ನಿರ್ದೇಶಕರಾದ ಸುರೇಂದ್ರ ಗೌಡ, ದಶರತ್ ರೆಡ್ಡಿ, ಯಶೋದಮ್ಮ ಶ್ರೀನಿವಾಸ್ ರೆಡ್ಡಿ, ಯುವರಾಣಿ ವೆಂಕಟಾಚಲಪತಿ, ಮುರಳಿ ಕೃಷ್ಣ, ಗ್ರಾಪಂ ಅಧ್ಯಕ್ಷೆ ಭವಾನಿ ಜಯಪಾಲ್, ಸುವರ್ಣ ವೆಂಕಟರಾಮ್, ಮುಖಂಡರಾದ ಭಾರ್ಗವ್ ರಾಮ್, ರಾಮ್ ಬಾಬು, ವೆಂಕಟರಾಮ್, ಕೃಷ್ಣಮೂರ್ತಿ, ಅಪ್ಪಾಜಿ ಗೌಡ, ಮುನಿಸ್ವಾಮಿ ರೆಡ್ಡಿ, ಶಂಕರ್, ಮುರಳಿ ಮೋಹನ್, ಎಂಬಿಎ ಕೃಷ್ಣಪ್ಪ, ನಾರಾಯಣಸ್ವಾಮಿ ಇದ್ದರು.