ಚಿಕ್ಕಮಗಳೂರು : ಒಳ ಚರಂಡಿ ಮತ್ತು ಅಮೃತ್ ಯೋಜನೆಯಿಂದ ಹಾಳಾಗಿರುವ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಎಸ್‌ಎಫ್‌ಸಿ ಅನುದಾನದಲ್ಲಿ ₹10 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಶುಕ್ರವಾರ ಚಿಕ್ಕಮಗಳೂರು ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪಕ್ಷಾತೀತವಾಗಿ ನಗರಸಭೆಯ ಎಲ್ಲಾ ವಾರ್ಡ್‌ಗಳ ರಸ್ತೆಗಳ ಅಭಿವೃದ್ಧಿಗೆ ಈ ಅನುದಾನ ಬಳಸಿ ನಗರದ ಸರ್ವತೋಮುಖ ಅಭಿವೃದ್ಧಿಪಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ಮೊದಲ ಆದ್ಯತೆಯಾಗಿ ನಗರದ ಕೆಲವು ಪ್ರಮುಖ ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ವಾರ್ಡಿನ ಸದಸ್ಯರು ಪಕ್ಷ ನೋಡದೆ ಅವಶ್ಯಕತೆ ಇರುವಲ್ಲಿ ಮೊದಲ ಆದ್ಯತೆ ನೀಡಿ ಕೆಲಸ ಮಾಡಬೇಕೆಂದು ಸೂಚಿಸಿದರು. ಹೆಚ್ಚು ಜನರ ಓಡಾಟ, ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳನ್ನು ಮೊದಲ ಆದ್ಯತೆ ಮೇರೆಗೆ ತೆಗೆದುಕೊಂಡು, ಕ್ರಿಯಾ ಯೋಜನೆ ತಯಾರಿಸಿ ಅತೀ ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.
ಮುಂದಿನ 3 ತಿಂಗಳೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಮುಗಿಸಲು ಕಾಲಾವಕಾಶ ಬೇಕು. ಮಳೆಗಾಲ ಆರಂಭವಾಗುವ ಒಳಗಾಗಿ ಕಾಮಗಾರಿ ಪೂರ್ಣ ಗೊಳಿಸಿದರೆ ಸಾರ್ಥಕವಾಗುತ್ತದೆ ಎಂದರು.
ನಗರದ ಬಸವನಹಳ್ಳಿ ಮುಖ್ಯ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಒಕ್ಕಲಿಗರ ಭವನಕ್ಕೆ ಹೋಗುವ ರಸ್ತೆ, ಆಂಜನೇಯ ದೇವಸ್ಥಾನದ ರಸ್ತೆ, ಬಾರ್ ಲೈನ್ ರಸ್ತೆ, ಶರೀಫ್ ಗಲ್ಲಿ, ಟೆಂಡರ್ ಚಿಕನ್‌ನಿಂದ ಮಾರ್ಕೆಟ್ ರಸ್ತೆಗೆ ಸಂಪರ್ಕಿಸುವ ರಸ್ತೆ, ಹೌಸಿಂಗ್ ಬೋರ್ಡ್‌ನ ಎಚ್‌ಐಜಿ 3ನೇ ಹಂತದ 60 ಅಡಿ ರಸ್ತೆ, ಕೋಟೆ ಸುಗ್ಗಿಕಲ್ ರಸ್ತೆ, ಉಂಡೇದಾಸರಹಳ್ಳಿ ಮುಂತಾದ ರಸ್ತೆಗಳ ಅಭಿವೃದ್ಧಿಗೆ ತುರ್ತುಕ್ರಮ ವಹಿಸುವಂತೆ ಸೂಚಿಸಿದರು.
ನಗರದಲ್ಲಿ ಆದ್ಯತೆ ಮೇರೆಗೆ 15ನೇ ಹಣಕಾಸು ಯೋಜನೆ ಅನುದಾನವನ್ನು ವಿದ್ಯುತ್ ಬೀದಿ ದೀಪ ಅಳವಡಿಕೆಗೆ ಬಳಸಲಾಗಿದೆ. ಮುಂದೆ ಬಿಡುಗಡೆಯಾಗುವ ಅನುದಾನದಲ್ಲಿ ಬೇಲೂರು ರಸ್ತೆ ಬಸ್ ತಂಗುದಾಣದಿಂದ ಹಿರೇಮಗಳೂರು ವರೆಗೆ ಹಾಗೂ ಟೌನ್ ಕ್ಯಾಂಟೀನ್‌ನಿಂದ ಮೌಂಟೇನ್ ವ್ಯೂ ಶಾಲೆವರೆಗೆ ಹಂತ ಹಂತವಾಗಿ ಬೀದಿದೀಪ ಅಳವಡಿಸಲಾಗುವುದೆಂದು ಹೇಳಿದರು.2012ರಲ್ಲಿ ಆರಂಭಗೊಂಡ ಯುಜಿಡಿ ಕಾಮಗಾರಿ 2025 ಆದರೂ ಪೂರ್ಣವಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಮರು ಟೆಂಡರ್ ಕರೆದು ಕಾಮಗಾರಿಗೆ ಆದೇಶ ನೀಡುವಂತೆ ಸಲಹೆ ನೀಡಿದರು.ನಗರಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ನಗರಸಭೆ 35 ವಾರ್ಡ್‌ಗಳ ಅಭಿವೃದ್ಧಿಗೆ ಶಾಸಕರು ಸರ್ಕಾರ ದಿಂದ ₹10 ಕೋಟಿ ಅನುದಾನ ತಂದಿರುವುದಕ್ಕೆ ಅಭಿನಂದಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಪೌರಾಯುಕ್ತ ಬಿ.ಸಿ.ಬಸವರಾಜು ಉಪಸ್ಥಿತರಿದ್ದರು.
ಕಂದಾಯ ಭೂಮಿಯಲ್ಲಿ ನಿವೇಶನ, ಮನೆ ನಿರ್ಮಾಣ: ಬಿ - ಖಾತೆಗೆ ಅವಕಾಶಚಿಕ್ಕಮಗಳೂರು: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ನಿವೇಶನ ಹೊಂದಿದ ಮನೆ ನಿರ್ಮಾಣ ಮಾಡಿರುವ ನಾಗರಿಕರಿಗೆ ಸರ್ಕಾರ ಬಿ-ಖಾತೆ ನೀಡಲು ಸರ್ಕಾರ ಹೊರಡಿಸಿದ ಆದೇಶದಂತೆ ನಾಳೆ ಯಿಂದಲೇ ಅಭಿಯಾನ ಆರಂಭವಾಗಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಶುಕ್ರವಾರ ನಗರಸಭೆ ಸಾಮಾನ್ಯಸಭೆಯಲ್ಲಿ ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಮನೆ, ನಿವೇಶನ ಹೊಂದಿದ್ದರೆ, ಈಗಾಗಲೇ ನಗರಸಭೆಯಿಂದ ಮೂಲಭೂತ ಸೌಕರ್ಯ ಪಡೆದಿದ್ದಾರೆ. ಆದರೆ, ಸ್ಥಳೀಯ ಸಂಸ್ಥೆ ಗಳಿಗೆ ಕಂದಾಯ ಪಾವತಿ ಮಾಡುತ್ತಿಲ್ಲ. ಜೊತೆಗೆ ದಾಖಲಾತಿ ಕೊರತೆಯಿಂದ ಸ್ವತ್ತುಗಳ ಮಾರಾಟ ಮತ್ತು ಸಾಲ ಸೌಲಭ್ಯ ಪಡೆಯಲು ತೊಂದರೆಯಾಗಿದೆ ಎಂದು ಹೇಳಿದರು.
ಕಂದಾಯ ಭೂಮಿಯಲ್ಲಿ ಮನೆ, ನಿವೇಶನ ಹೊಂದಿರುವ ನಾಗರಿಕರ ಅನುಕೂಲಕ್ಕಾಗಿ ನೋಂದಣಿ, ದಾನಪತ್ರ, ವಿಭಾಗ ಪತ್ರ, ಸ್ವತ್ತಿನ ಭಾವಚಿತ್ರ, ಮಾಲೀಕರ ಭಾವಚಿತ್ರದೊಂದಿಗೆ ಆಧಾರ್ ಕಾರ್ಡ್ ಪ್ರತಿ, ಪಾನ್‌ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿ ಲಗತ್ತಿಸಿ ನಗರಸಭೆಗೆ ಅರ್ಜಿ ಸಲ್ಲಿಸಿ ಗಣಕೀಕರಣ ಮಾಡಿಸಿದರೆ ಬಿ-ಖಾತೆ ಮಾಡಬಹುದಾಗಿದೆ ಎಂದರು.
ಈ ಅವಕಾಶ 2025ರ ಮೇ 10 ರವರೆಗೆ ಲಭ್ಯವಿದ್ದು, ನಗರದ ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ ಶಾಸಕರು, ಇದರಿಂದ ನಗರಸಭೆ ಆದಾಯ ದ್ವಿಗುಣವಾಗಲಿದೆ. ನಗರಸಭೆ ಸಿಬ್ಬಂದಿ, ಅಧಿಕಾರಿಗಳು, ಬಿಲ್ ಕಲೆಕ್ಟರ್ ಈ ಕುರಿತು ಜಾಗೃತಿ ಮೂಡಿಸಿ ಗಂಟೆಗಾಡಿಯಲ್ಲಿ ಪ್ರಚಾರ ಮಾಡುವ ಜೊತೆಗೆ ಕರಪತ್ರದ ಮೂಲಕ ಮನವರಿಕೆ ಮಾಡುವಂತೆ ಸೂಚಿಸಿದರು.