ಕನ್ನಡಪ್ರಭ ವಾರ್ತೆ ಮಂಡ್ಯ
ಕಂಪನಿಯು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ಹಂಗಾಮಿಗೆ ಕಬ್ಬು ಕಟಾವು ಮಾಡುವ ಆಳುಗಳಿಗೆ ಮತ್ತು ಸಾರಿಗೆ ವೆಚ್ಚಕ್ಕೆ ೧೫ ಕೋಟಿ ರು. ಹಾಗೂ ೨೫ ಕೋಟಿ ರು. ದುಡಿಯುವ ಬಂಡವಾಳ ಅವಶ್ಯಕತೆ ಇರುವುದರಿಂದ ಒಟ್ಟು ೪೦ ಕೋಟಿ ರು. ಹಣ ಬಿಡುಗಡೆ ಮಾಡುವಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರವನ್ನು ಕೋರಿದ್ದರು.
ಆದರೆ, ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಹಂಗಾಮಿಗೆ ಕಬ್ಬು ಅರೆಯಲು ಅಗತ್ಯವಿರುವ ದುಡಿಯುವ ಬಂಡವಾಳದ ಸಲುವಾಗಿ ೧೦ ಕೋಟಿ ರು.ಗಳನ್ನು ಮಾತ್ರ ನೀಡಿ ಕೈ ತೊಳೆದುಕೊಂಡಿರುವುದಲ್ಲದೆ, ಷರತ್ತುಗಳನ್ನು ವಿಧಿಸಿದೆ.ಈ ಆದೇಶದಲ್ಲಿ ಬಿಡುಗಡೆಗೊಳಿಸಿದ ೧೦ ಕೋಟಿ ರು. ಮೊತ್ತವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಖಜಾನೆಯಿಂದ ಸೆಳೆಯುವ ಅಧಿಕಾರವನ್ನು ಹೊಂದಿದ್ದಾರೆ. ಈ ಹಣ ಸೆಳೆಯುವ ಬಿಲ್‌ನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಮೇಲುಸಹಿಯೊಂದಿಗೆ ಖಜಾನೆಗೆ ಸಲ್ಲಿಸುವಂತೆ ಸೂಚಿಸಿದೆ.
೨೦೨೬-೨೭ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನಿಂದ ಮೈಷುಗರ್ ಕಂಪನಿ ಕಾರ್ಯಾಚರಣೆಯನ್ನು ಎಲ್‌ಆರ್‌ಒಟಿ (ಗುತ್ತಿಗೆ, ನವೀಕರಣ, ಕಾರ್ಯಾಚರಣೆ, ವರ್ಗಾವಣೆ) ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂಬಂಧ ನಿಯಮಾನುಸಾರ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಾರಾಮ ತಿಳಿಸಿದ್ದಾರೆ.ಕಬ್ಬು ಅರೆಯುವಿಕೆಗೆ ಸಜ್ಜುಗೊಳ್ಳದ ಮೈಷುಗರ್
ಕಾರ್ಖಾನೆಯೊಳಗೆ ಇನ್ನೂ ಯಂತ್ರೋಪಕರಣಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು ಕಬ್ಬು ಅರೆಯುವಿಕೆಗೆ ಸಂಪೂರ್ಣ ಸಜ್ಜುಗೊಂಡಿಲ್ಲ. ೪.೫೦ ಲಕ್ಷ ಟನ್ ಒಪ್ಪಿಗೆ ಕಬ್ಬಿನಲ್ಲಿ ಸಾವಿರಾರು ಟನ್ ಕಬ್ಬು ಈಗಾಗಲೇ ಖಾಸಗಿ ಕಾರ್ಖಾನೆಯತ್ತ ಸಾಗಣೆಯಾಗುತ್ತಿದೆ. ಮೈಷುಗರ್ ಕಬ್ಬು ಕಟಾವಿಗೆ ಬಂದ ಕೂಲಿ ಕಾರ್ಮಿಕರು ಖಾಸಗಿ ಕಾರ್ಖಾನೆಗಳ ಪಾಲಾಗಿದ್ದಾರೆ. ಸರ್ಕಾರ ಜುಲೈ ತಿಂಗಳಲ್ಲಿ ದುಡಿಮೆ ಬಂಡವಾಳವಾಗಿ ೧೦ ಕೋಟಿ ರು. ಹಣವನ್ನು ಸಾಲದ ರೂಪದಲ್ಲಿ ನೀಡಿದೆ. ಹಲವು ಷರತ್ತುಗಳನ್ನೂ ವಿಧಿಸಿ ಮುಂದಿನ ಸಾಲಿನಿಂದ ಖಾಸಗಿಯವರಿಗೆ ವಹಿಸುವ ಮುನ್ಸೂಚನೆಯನ್ನೂ ನೀಡಿದೆ.