ಕನ್ನಡಪ್ರಭ ವಾರ್ತೆ ಮಂಡ್ಯ
ಶರಣ ನುಲಿಯ ಚಂದಯ್ಯನವರ ೯೧೮ನೇ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದರೂ ಸಹ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಲು ತೀರ್ಮಾನಿಸಿ ವಚನಕಾರರಿಗೆ ಅಪಮಾನ ಮಾಡಿದ್ದಾರೆ ಎಂದು ಸಭೆಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ಆರೋಪಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶರಣ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಕುರಿತಂತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶರಣರ ಜಯಂತಿ ಮಾಡಲು ಸರ್ಕಾರವೇ ಅಧಿಕೃತ ಘೋಷಣೆ ಮಾಡಿದ್ದರೂ ಇನ್ನು ಜಿಲ್ಲೆಯ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿಗಳು, ಶಾಲಾ ಕಾಲೇಜುಗಳಲ್ಲಿ ಆಚರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಅವರಿಗೆ ಪತ್ರ ಸಲ್ಲಿಸಿ ರಾಜ್ಯಾದ್ಯಂತ ಏಕಕಾಲದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸುವಂತೆ ಕೂಡಲೇ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.ರಾಜ್ಯ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಮಟ್ಟದಲ್ಲಿ ಶರಣ ನುಲಿಯ ಚಂದಯ್ಯ ಅವರ ೯೧೮ನೇ ಜಯಂತ್ಯೋತ್ಸವವನ್ನು ಸೆ.೧ರಂದು ಆಚರಿಸುತ್ತಿದ್ದು, ಅಂದು ಜಿಲ್ಲೆಯಲ್ಲೂ ಆಚರಿಸಿ ಸಮಸ್ತ ಚಂದಯ್ಯನ ಅನುಯಾಯಿಗಳು ರಾಜ್ಯ ಮಟ್ಟದ ಜಯಂತಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಅಂದು ರಜಾದಿನವಾಗಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ಜಯಂತಿಯನ್ನು ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅನುಕೂಲವಾಗುವ ರೀತಿಯಲ್ಲಿ ಬದಲಿ ದಿನಾಂಕದಂದು ಆಚರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ರೋಟರಿ ಸಂಸ್ಥೆ ನಿರ್ದೇಶಕಿ ಅನುಪಮಾ, ಕಾಂಗ್ರೆಸ್ ಮುಖಂಡ ಅಮ್ಜದ್‌ಪಾಷ ಹಾಗೂ ಮುಖಂಡರಾದ ಕೆ.ವಿ.ನಾಗರಾಜು, ರಾಮಶೆಟ್ಟಿ, ಟೆಂಪೋ ರಾಮಕೃಷ್ಣ, ಜಿ.ರಾಘವೇಂದ್ರ, ಅರಳಕುಪ್ಪೆ ಶ್ರೀನಿವಾಸ್, ರಾಮಚಂದ್ರ, ಪಂಚೇಗೌಡನದೊಡ್ಡಿ ವರದರಾಜ್, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ವಿಜಯಕುಮಾರ್ ತಿರುಮಲಾಪುರ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.