ಹವ್ಯಕ ವಸತಿ ನಿಲಯಕ್ಕೆ ₹10 ಲಕ್ಷ: ಹೊರಟ್ಟಿ

KannadaprabhaNewsNetwork |  
Published : Jul 21, 2025, 12:00 AM IST
20ಎಚ್‌ಯುಬಿ28ಹವ್ಯಕ ಭವನದ ಶ್ರೀ ಶಂಕರ ಸಭಾ ಭವನದಲ್ಲಿ ನಡೆದ ಹವ್ಯಕ ಹಬ್ಬ, ಪ್ರತಿಭಾ ಪುರಸ್ಕಾರ ಹಾಗೂ ಹವ್ಯಕ ಸಂಪರ್ಕ ಸೇತು ಡೈರೆಕ್ಟರಿ ಬಿಡುಗಡೆ ಸಮಾರಂಭವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಹವ್ಯಕ ಸಮಾಜ ನನ್ನ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ಹವ್ಯಕ ಶಿಕ್ಷಕರು ಹೆಚ್ಚು ಮತ ನೀಡುವ ಮೂಲಕ ಮೇಲ್ಮನೆಗೆ ಕಳುಹಿಸಿದ ಪರಿಣಾಮ ಇದೀಗ 45 ವರ್ಷ ಪೂರ್ಣಗೊಳಿಸಿ ಗಿನ್ನಿಸ್ ದಾಖಲೆ ಬರೆಯಲು ಸಾಧ್ಯವಾಗಿದೆ. ನಾನು ರಾಮಕೃಷ್ಣ ಹೆಗಡೆ ಅವರ ಅಚ್ಚುಮೆಚ್ಚಿನ ಶಿಷ್ಯ. ಮನೆಯ ಮಗನಂತೆ ಅವರೊಟ್ಟಿಗೆ ಇದ್ದೆ. ಅವರೇ ನನಗೆ ನಿಜವಾದ ಮಾರ್ಗದರ್ಶಕರಾಗಿದ್ದು, ಅವರಿಂದಲೇ ನನಗೆ ರಾಜಕೀಯ ಜೀವನ ಸಿಕ್ಕಿದೆ.

ಹುಬ್ಬಳ್ಳಿ: ನನ್ನ ಬೆಳವಣಿಗೆಗೆ ಶಕ್ತಿಯಾಗಿರುವ ಹವ್ಯಕ ಸಮಾಜಕ್ಕೆ ಎಲ್ಲ ರೀತಿಯ ನೆರವು ನೀಡುವ ಕೆಲಸ ಮಾಡುತ್ತಿದ್ದೇನೆ. ಅಲ್ಲದೇ, ಹವ್ಯಕ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಿಸಲು ₹10 ಲಕ್ಷ ದೇಣಿಗೆ ನೀಡುವುದಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹವ್ಯಕ ಮಹಿಳಾ ಮಂಡಳದ ವತಿಯಿಂದ ಇಲ್ಲಿಯ ಹವ್ಯಕ ಭವನದ ಶ್ರೀ ಶಂಕರ ಸಭಾ ಭವನದಲ್ಲಿ ನಡೆದ ಹವ್ಯಕ ಹಬ್ಬ, ಪ್ರತಿಭಾ ಪುರಸ್ಕಾರ ಹಾಗೂ ಹವ್ಯಕ ಸಂಪರ್ಕ ಸೇತು ಡೈರೆಕ್ಟರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹವ್ಯಕ ಸಮಾಜ ನನ್ನ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ಹವ್ಯಕ ಶಿಕ್ಷಕರು ಹೆಚ್ಚು ಮತ ನೀಡುವ ಮೂಲಕ ಮೇಲ್ಮನೆಗೆ ಕಳುಹಿಸಿದ ಪರಿಣಾಮ ಇದೀಗ 45 ವರ್ಷ ಪೂರ್ಣಗೊಳಿಸಿ ಗಿನ್ನಿಸ್ ದಾಖಲೆ ಬರೆಯಲು ಸಾಧ್ಯವಾಗಿದೆ. ನಾನು ರಾಮಕೃಷ್ಣ ಹೆಗಡೆ ಅವರ ಅಚ್ಚುಮೆಚ್ಚಿನ ಶಿಷ್ಯ. ಮನೆಯ ಮಗನಂತೆ ಅವರೊಟ್ಟಿಗೆ ಇದ್ದೆ. ಅವರೇ ನನಗೆ ನಿಜವಾದ ಮಾರ್ಗದರ್ಶಕರಾಗಿದ್ದು, ಅವರಿಂದಲೇ ನನಗೆ ರಾಜಕೀಯ ಜೀವನ ಸಿಕ್ಕಿದೆ. ಅಂದಿನಿಂದಲೂ ಹವ್ಯಕ ಸಮುದಾಯದೊಂದಿಗೆ ನಾನು ಅವಿನಾಭಾವ ಸಂಬಂಧ ಹೊಂದಿದ್ದೇನೆ. ಅದರಂತೆ ಸಮುದಾಯ ನನ್ನ ಬೆನ್ನಿಗೆ ನಿಂತು ಕಾರ್ಯನಿರ್ವಹಿಸುತ್ತಿದೆ ಎಂದರು.

ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಪ್ರಾಚೀನ ಕನ್ನಡ ಭಾಷೆಗೆ ಹವ್ಯಕ ಭಾಷೆಯ ಹೋಲಿಕೆ ಇದೆ. ಇದು ನಮ್ಮ ಹೆಮ್ಮೆ. ನಮ್ಮ ಸಂಸ್ಕೃತಿ ಶ್ರೀಮಂತವಾದದು. ಲೋಕಕಲ್ಯಾಣಕ್ಕಾಗಿಯೇ ಈ ಸಮಾಜವಿದೆ. ನಮ್ಮದು ಮೂಲ ಕೃಷಿಯಾಗಿದ್ದರೂ ಸಂಘಟಿತರಾಗುವಲ್ಲಿ ಹಿಂದೆ ಬಿದ್ದಿದ್ದು, ಸಮಾಜ ಬಂಧುಗಳು ಒಗ್ಗಟ್ಟಾಗಿ ನಮ್ಮ ಅಭಿವೃದ್ಧಿ ಮತ್ತು ಸಂರಕ್ಷಣೆ ಮುಂದಾಗಬೇಕು ಎಂದರು.

ಸೆಲ್ಕೋ ಸೋಲಾರ್ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಹವ್ಯಕರ ಜೀವ ಕಣದಲ್ಲೂ ಶಕ್ತಿ ಇದೆ. ಸಮಾಜದ ಏಳ್ಗೆಗೆ ಕಾರಣರಾದವರು ಶಂಕರಾಚಾರ್ಯರು. ಈಗಲಾದರೂ ಎಚ್ಚೆತ್ತು ನಮ್ಮ ಸಂಸ್ಕೃತಿ, ನಡೆ-ನುಡಿ, ಆಚರಣೆಗಳನ್ನು ವಿಧಿವತ್ತಾಗಿ ಪಾಲಿಸಬೇಕು. ಸಂಕೋಚ ಮತ್ತು ಸಂಕುಚಿತತೆ ಬಿಡಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಗುತ್ತಿಗೆದಾರ ಜಿ.ಜಿ. ಭಟ್ಟ, ಭರತನಾಟ್ಯ ಕಲಾವಿದೆ ಡಾ. ಸಹನಾ ಭಟ್ಟ, ವೇ.ಮೂ. ಸೂರ್ಯನಾರಾಯಣ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಧಾರ್ಮಿಕ ಪೂಜಾ ಕಾರ್ಯಕ್ರಮ, ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ನಂತರ ರಾತ್ರಿಯ ವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹವ್ಯಕ ಸಾಂಪ್ರದಾಯಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಹವ್ಯಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಗೌರವ ಕಾರ್ಯದರ್ಶಿ ಸುದರ್ಶನ ಜಿ.ಎಚ್., ಖ್ಯಾತ ಅರ್ಥಶಾಸ್ತ್ರಜ್ಞ ಗೋಪಾಲಕೃಷ್ಣ ಕಡೆಕೋಡಿ, ಅಖಿಲ ಹವ್ಯಕ ಮಹಾಸಭಾ ಮಾಜಿ ಅಧ್ಯಕ್ಷ ಎಂ.ಕೆ. ಹೆಗಡೆ, ಕಾರ್ಯದರ್ಶಿ ವೇಣು ವಿಘ್ನೇಶ ಸಂಪ, ವಸಂತ ಭಟ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ವೀಣಾ ಹೆಗಡೆ, ಅನಿತಾ ಭಟ್ ಇತರರು ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!