ಭಟ್ಕಳ: ಗ್ರಾಮಾಂತರ ಜನರ ಸಮಸ್ಯೆ ಆಲಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸುತ್ತಿದ್ದೇನೆ. ಇಂತಹ ಜನಸ್ಪಂದನ ಸಭೆಯಿಂದ ಜನತೆಗೆ ಅನುಕೂಲವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ಹಿಂದೆ ನಾನು ಶಾಸಕನಿದ್ದಾಗ ₹1500 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೆ. ಈಗ ಸಚಿವನಾಗಿದ್ದು, ಕ್ಷೇತ್ರಕ್ಕೆ ₹10 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇನೆ. ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ಧಿ ಕೆಲಸಗಳು ನಿಂತಿದೆ ಎಂದು ವಿರೋದ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಯ ಸಮರ್ಪಕ ಅನುಷ್ಠಾನದ ಜತೆಗೆ ರಸ್ತೆ, ಮನೆ, ಬಾವಿ ಸೇರಿದಂತೆ ಅಗತ್ಯ ಅಭಿವೃದ್ಧಿ ಕೆಲಸಗಳಿಗೂ ಅನುದಾನ ನೀಡುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸುವುದರಿಂದ ಆ ಭಾಗದ ಸಮಸ್ಯೆ ತಿಳಿದು ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.ಗ್ರಾಮದ ಖಂಡ್ಕ ಸೇರಿದಂತೆ ವಿವಿಧ ಕಡೆ ಅಗತ್ಯವಿರುವ ಸೇತುವೆ, ರಸ್ತೆ ಕಾಮಗಾರಿ, ಕೋಣಾರ ಶಾಲೆಗೆ ನೂತನ ಕಟ್ಟಡ ಮಾಡಿಕೊಡುವಂತೆ ಜನರು ಸಚಿವರಲ್ಲಿ ಮನವಿ ಮಾಡಿದರು.
ಸಚಿವರಿಗೆ ಗ್ರಾಮಸ್ಥರು ವಿವಿಧ ಅಭಿವೃದ್ಧಿ ಕೆಲಸದ ಬಗ್ಗೆ ಮನವಿ ಸಲ್ಲಿಸಿದರು. ಸಚಿವರು ಕೋಣಾರದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು.