ಕನ್ನಡಪ್ರಭ ವಾರ್ತೆ ಅರಸೀಕೆರೆ
ರಸ್ತೆ ಅಭಿವೃದ್ಧಿ ಹೆಚ್ಚಾದಷ್ಟು ಸಂಚಾರ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಹಾಳಾದ ಹಾಗೂ ಗುಂಡಿ ಬಿದ್ದ ರಸ್ತೆಗಳಿಂದ ಅಪಘಾತಗಳು ಹೆಚ್ಚಾಗಲಿದ್ದು, ರಸ್ತೆ ಅಭಿವೃದ್ದಿಯಿಂದ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ (ಹುಲ್ಲಳ್ಳಿ) ತಿಳಿಸಿದರು.ತಾಲೂಕಿನ ಜಾವಗಲ್ ಹೋಬಳಿಯ ಬಂದೂರು ಗ್ರಾಮದಿಂದ ಜಾವಗಲ್ ಗ್ರಾಮದ ಕಡೆಗೆ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿ ಆಗುತ್ತಿರುವ ರಸ್ತೆಯಿಂದ ಮುಂದುವರಿದ ಭಾಗದ ರು. 1.5 ಕೋಟಿಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು. ಜಾವಗಲ್ ಹೋಬಳಿಯು ಅತಿ ದೊಡ್ಡ ಹೋಬಳಿಯಾಗಿದ್ದು ವ್ಯಾಪಾರ, ವ್ಯವಹಾರಗಳು ಹೆಚ್ಚಾಗಿ ನಡೆಯುವ ಈ ಹೋಬಳಿ ಕೇಂದ್ರಕ್ಕೆ ಗ್ರಾಮೀಣ ಭಾಗದಿಂದ ನಿತ್ಯವು ಸಾವಿರಾರು ಸಾರ್ವಜನಿಕರು ತಮ್ಮ ನಿತ್ಯದ ಚಟುವಟಿಕೆಗಳಿಗೆ ಬಂದು ಹೋಗುವುದರಿಂದ ಸಮರ್ಪಕವಾದ ರಸ್ತೆಗಳು ಅತ್ಯಗತ್ಯವಾಗಿದೆ ಎಂದರು. ಅನೇಕ ವರ್ಷಗಳಿಂದ ಈ ಭಾಗದ ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು, ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರು ತೀವ್ರತರವಾದ ಕಷ್ಟ ಪಡುವುದನ್ನು ನೋಡಿದಾಗ ನನಗೆ ತೀವ್ರವಾದ ಬೇಸರವಾಗುತಿತ್ತು. ಜಾವಗಲ್, ಅರಸೀಕೆರೆ,ಚಿಕ್ಕಮಗಳೂರು, ಬೇಲೂರು, ಹಾಸನಕ್ಕೆ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ನಿತ್ಯದ ಕೆಲಸ ಕಾರ್ಯಗಳಿಗೆ ಹೋಗುವ ಮಹಿಳೆಯರು, ವಯೋವೃದ್ಧರು ಅವ್ಯವಸ್ಥಿತವಾದ ರಸ್ತೆಯ ಬಗ್ಗೆ ಅನೇಕ ಬಾರಿ ದೂರಿದ್ದು, ಉತ್ತಮ ರಸ್ತೆಯನ್ನು ನಿರ್ಮಾಣ ಕೊಡುವಂತೆ ಮನವಿ ಮಾಡಿದ ಮೇರೆಗೆ, ಶಕ್ತಿ ಮೀರಿ ರಸ್ತೆ ಅಭಿವೃದ್ಧಿಗೆ ಹಣವನ್ನು ಮಂಜೂರು ಮಾಡಿಸಲು ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇಡೀ ಹೋಬಳಿಯ ಎಲ್ಲ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಉಪಯೋಗವಾದರೆ ಅದಕ್ಕಿಂತ ಸಾರ್ಥಕತೆ ನನಗೆ ಮತ್ತೊಂದು ಇರಲಾರದು. ಜನರ ಆಶೀರ್ವಾದದಿಂದ ಚುನಾಯಿತನಾಗಿ ಶಾಸಕನಾಗಿರುವ ನನಗೆ ಅವರ ಸೇವೆಯನ್ನು ಮಾಡುವುದೇ ಮುಖ್ಯ ಗುರಿಯಾಗಿದ್ದು, ಜನರ ಸೇವೆಗಾಗಿ ದಿನದ 24 ಗಂಟೆಯೂ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.ಅಂತಾರಾಷ್ಟ್ರೀಯ ಕ್ರೀಡಾ ಲೋಕಕ್ಕೆ ಜಾವಗಲ್ ಶ್ರೀನಾಥ್ ರಂತಹ ಅಂತಾರಾಷ್ಟ್ರೀಯ ಕ್ರೀಡಾ ಪ್ರತಿಭೆಯನ್ನು ಕೊಟ್ಟಂತಹ ಕನ್ನಡಕ್ಕೆ ಜಾವಗಲ್ ಗ್ರಾಮವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಹೊಯ್ಸಳರ ಕಾಲದ ಸಾವಿರ ವರ್ಷಗಳ ಐತಿಹಾಸಿಕ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ನಮ್ಮ ಕ್ಷೇತ್ರದಲ್ಲಿರುವುದೇ ಹೆಮ್ಮೆಯ ಸಂಗತಿಯಾಗಿದ್ದು, ಜಾವಗಲ್ ಗ್ರಾಮ ಹಾಗೂ ಹೋಬಳಿಯಲ್ಲಿ ಇರುವ ಹಲವಾರು ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸಲು ಪ್ರಯತ್ನಿಸುತ್ತಿದ್ದು, ಜಾವಗಲ್ ಹೋಬಳಿಯ ಸಮಗ್ರ ಅಭಿವೃದ್ದಿಗಾಗಿ ಹೆಚ್ಚಿನ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಹಾಳಾಗಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ, ಹಾಗೂ ಈ ಭಾಗದಲ್ಲಿನ ಕೆರೆ ಅಭಿವೃದ್ಧಿ ಕಾಮಗಾರಿ, ಸೇತುವೆ ನಿರ್ಮಾಣ ಮತ್ತು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಭೂಮಿಪೂಜೆಯಲ್ಲಿ ಭಾಗವಹಿಸಿದ್ದ ಗಣ್ಯರನ್ನು ಮುಖಂಡರಾದ ಎಲ್.ಆರ್.ರಮೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಾವಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಿತ್ರಾ ಧರ್ಮೇಗೌಡ, ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಭಾಗ್ಯ ರವಿಶಂಕರ್, ರಂಗಸ್ವಾಮಿ, ಮುಖಂಡರಾದ ಸಿದ್ದಪ್ಪಶೆಟ್ಟಿ, ಟೈಲರ್ ಪಾಪಣ್ಣ, ರೇಣುಕಾಪ್ರಸಾದ್, ಮಾರಗೊಂಡನಹಳ್ಳಿ ನವೀನ್ ಉಪಸ್ಥಿತರಿದ್ದರು.