ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ನಡೆದ ಶಿವಮೊಗ್ಗ ತಾಲೂಕು ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ತೆರಿಗೆ ವಿಧಿಸಬಾರದು ಎಂಬುದು ನೆಹರು ಅವರ ಅಪೇಕ್ಷೆಯಾಗಿತ್ತು. ಸಹಕಾರಿ ಕ್ಷೇತ್ರದಲ್ಲಿ ಜಾತಿ, ಪಕ್ಷ, ಲಿಂಗ ತಾರತಮ್ಯ ಇರಬಾರದು. ಆದರೆ, ಈ ತತ್ವಗಳನ್ನು ಇಂದು ಗಾಳಿಗೆ ತೂರಲಾಗುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸಹಕಾರ ಕ್ಷೇತ್ರದಿಂದ ಮಾತ್ರ ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಸಾಧ್ಯ. ಸಹಕಾರಿ ಕ್ಷೇತ್ರ ಜನರ ಚಳವಳಿಯಾಗಿ ಮುಂದುವರೆಯಬೇಕು. ಖಾಸಗಿ ಸಾಲಗಾರರ ಕೈಯಿಂದ ಸಣ್ಣ ರೈತರನ್ನು ಕಾಪಾಡಲು ಸಹಕಾರ ಸಂಸ್ಥೆಯನ್ನು ಸಿದ್ದನಗೌಡ ಪಾಟೀಲರು ಸ್ಥಾಪಿಸಿದರು. ನೆಹರು, ಗಾಂಧಿ, ಸಣ್ಣರಾಮನಗೌಡ ಸಿದ್ದನಗೌಡ ಪಾಟೀಲ್ ಅವರ ಭಾವಚಿತ್ರ ಪ್ರತಿ ಕಾರ್ಯಕ್ರಮದಲ್ಲೂ ಇರಬೇಕು. ಪಾಟೀಲ್ ಅವರು ಕಂಡ ಕನಸುಗಳು ಇಂದು ನನಸಾಗುತ್ತಿವೆ ಎಂದು ತಿಳಿಸಿದರು.ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ ಕುರಿತು ಉಪನ್ಯಾಸ ನೀಡಿದ ಶಿವಮೊಗ್ಗ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸಹಕಾರ ವಲಯ ಮುಂಚೂಣಿಯಲ್ಲಿದೆ. ದೇಶದ ಅಭಿವೃದ್ಧಿಗೆ ಸಹಕಾರಿ ವಲಯ ಅತ್ಯಮೂಲ್ಯ ಕೊಡುಗೆ ನೀಡಿದೆ. ಜನರು ಇರುವಲ್ಲಿಯೇ ಎಲ್ಲ ಸೌಕರ್ಯ, ಸರಕುಗಳು ದೊರೆಯುವಂತೆ ಸಹಕಾರ ಸಂಘಗಳು ಮಾಡಬೇಕು. ಮನೆಗಳಿಗೆ ಹೋಗಿ ಸಹಕಾರ ಸಂಘದಲ್ಲಿ ಖಾತೆ ತೆರೆಯುವಂತೆ ಮನವಿ ಮಾಡಬೇಕು. ಇದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬಹುದು ಎಂದರು.
ವರ್ಗವಾರು ಸದಸ್ಯರ ಅವಶ್ಯಕತೆಗಳನ್ನು ಗಮನಿಸಿ, ಯೋಜನೆ ರೂಪಿಸಿ, ಕಾರ್ಯಗತ ಮಾಡಬೇಕು. ಆಡಳಿತ ಮಂಡಳಿ ಸಭೆಯಲ್ಲಿ ಜಮಾ ಖರ್ಚುಗಳನ್ನು ಮಾತ್ರ ಅವಲೋಕಿಸದೆ, ಲಾಭ ತರುವ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು. ಸರಿಯಾಗಿ ಕೆಲಸ ಮಾಡದಿದ್ದರೆ ಖಾಸಗಿ ವಲಯ ಇಲ್ಲಿಯೂ ಆಗಮಿಸಿ, ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.