ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಬಸವ ಸಮಿತಿ, ಮಂಡ್ಯ ಜಿಲ್ಲಾ ಶ್ರೀಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಮಂಡ್ಯ ಜಿಲ್ಲಾ ವೀರಶೈವ ಲಿಂಗಾಯತ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ನ. ೧೯ರಂದು ಬೆಳಗ್ಗೆ ೧೦ ಗಂಟೆಗೆ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮತ್ತು ಶ್ರೀ ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವ ಮತ್ತು ಜಿಲ್ಲೆಯ ಎಲ್ಲಾ ಮಠಾಧಿಪತಿಗಳ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಎಸ್. ಆನಂದ್ ತಿಳಿಸಿದರು.ಕನಕಪುರ ಶ್ರೀ ದೇಗುಲ ಮಠದ ಡಾ. ಶ್ರೀ ಮುಮ್ಮಡಿ ನಿರ್ವಾಹಣ ಮಹಾಸ್ವಾಮೀಜಿ, ಕನಕಪುರ ಮರಳೆ ಗವಿಮಠದ ಡಾ.ಮುಮ್ಮಡಿ ಶಿವರುದ್ರ ಮಹಾಸ್ವಾಮೀಜಿ, ಚಂದ್ರವನ(ಬೇಬಿಮಠ)ದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕೆ.ಆರ್.ಪೇಟೆ ತಾಲೂಕು ತೆಂಡೆಕೆರೆಯ ಬಾಳೆ ಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯಸ್ವಾಮೀಜಿ, ಮಳವಳ್ಳಿ ಧನಗೂರಿನ ವೀರ ಸಿಂಹಾಸನ ಸಂಸ್ಥಾನ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ವಿವಿಧ ಮಠಗಳ ಶ್ರೀಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯ ಶಾಸಕ ಪಿ.ರವಿಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಂಡ್ಯ ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷ ಎಂ.ಬಿ.ರಾಜಶೇಖರ್ ಅಧ್ಯಕ್ಷತೆ ವಹಿಸುವರು. ರೇಣುಕಾಚಾರ್ಯ ಮತ್ತು ಬಸವೇಶ್ವರರ ಜಯಂತ್ಯುತ್ಸವದ ಕುರಿತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಸಂಸ್ಕೃತ ವಿ.ವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ. ಶಿವಕುಮಾರಸ್ವಾಮಿ ಉಪನ್ಯಾಸ ನೀಡುವರು ಎಂದರು.ಮುಖ್ಯ ಅತಿಥಿಗಳಾಗಿ ವಿಶ್ವ ವೀರಶೈವ ಲಿಂಗಾಯಿತ ಒಕ್ಕೂಟದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಎಸ್.ಡಿ.ಜಯರಾಮ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉದ್ಯಮಿ ಎಂ.ಆರ್.ಉಮಾಪತಿ ಭಾಗವಹಿಸುವರು ಎಂದು ತಿಳಿಸಿದರು.
ಇದೇ ವೇಳೆ ಸಹಕಾರ ಸಂಘಗಳ ಉಪ ನಿಬಂಧಕ(ಪ್ರಭಾರ) ಎಚ್.ಆರ್. ನಾಗಭೂಷಣ್ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ್, ಮಂಡ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಎಂ.ಎಸ್.ಶಿವಪ್ರಕಾಶ್, ಷಡಕ್ಷರಿ, ಗುರುಸ್ವಾಮಿ, ರಮೇಶ್, ಕುಳ್ಳಪ್ಪ ಇದ್ದರು.