ಕನ್ನಡಪ್ರಭ ವಾರ್ತೆ ಬೆಂಗಳೂರು

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕಸವನಹಳ್ಳಿ ಕೆರೆಗೆ ಕಟ್ಟಡ ತ್ಯಾಜ್ಯವನ್ನು ಟ್ರ್ಯಾಕ್ಟರ್‌ಗಳಲ್ಲಿ ತಂದು ಸುರಿಯಲಾಗುತ್ತಿದ್ದು, ಭೂಗಳ್ಳರಿಂದ ಕೆರೆಯನ್ನು ರಕ್ಷಿಸಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಬೆಳ್ಳಂದೂರು ನಾಗರಿಕರ ಕಲ್ಯಾಣ ಸಂಘಗಳ ‘ಬೆಳ್ಳಂದೂರು ಫೋರಂ’ ಕೆರೆ ರಕ್ಷಣೆಗೆ ಒತ್ತಾಯಿಸಿ ದಕ್ಷಿಣ ಪಾಲಿಕೆ ಆಯುಕ್ತರಿಗೆ ಜಾಲತಾಣ ಎಕ್ಸ್‌ನಲ್ಲಿ ಕೋರಲಾಗಿದೆ.

ಕೆರೆ ಪ್ರದೇಶದಲ್ಲಿ ಟ್ರ್ಟಾಕ್ಟರ್‌ನಲ್ಲಿ ತಂದಿರುವ ತ್ಯಾಜ್ಯ ಸುರಿಯುತ್ತಿರುವ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡಲಾಗಿದ್ದು, ಕಸವನಹಳ್ಳಿ ಕೆರೆಯನ್ನು ಮುಗಿಸಲಾಗುತ್ತಿದೆ. ಭಾರಿ ಪ್ರಮಾಣದಲ್ಲಿ ತ್ಯಾಜ್ಯವನ್ನು ತುಂಬಲಾಗುತ್ತಿದೆ. ಆರ್‌ಎಂಸಿ, ಸಿಮೆಂಟ್ ಮಿಕ್ಸರ್ ಲಾರಿಗಳು ಕೆರೆಯನ್ನು ಅತಿಕ್ರಮಿಸಿಕೊಳ್ಳುತ್ತಿವೆ. ಒಳ ಚರಂಡಿ ನೀರು ಕೆರೆಗೆ ಹರಿಯುತ್ತಿದೆ. ತಕ್ಷಣವೇ ಕೆರೆ ಕಾಪಾಡಲು ಕ್ರಮ ವಹಿಸಿ ಎಂದು ಫೋರಂ ಒತ್ತಾಯಿಸಿದೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಮಹೇಶ್, ಇಂತಹ ಸಮಸ್ಯೆಗಳ ಮೇಲೆ ಪಾಲಿಕೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಾದ ಅಗತ್ಯವಿದೆ. ರಸ್ತೆ ಸ್ವಚ್ಛಗೊಳಿಸುವುದು, ಕಸ ವಿಲೇವಾರಿ, ಸ್ವಚ್ಛತೆ ಮುಂತಾದ ಕೆಲಸಗಳನ್ನು ಕೆಳಹಂತದ ಸಿಬ್ಬಂದಿಯೇ ಮಾಡಬಹುದು. ಸ್ಥಳೀಯ ಮೂಲಸೌಕರ್ಯ ವಿಚಾರಗಳನ್ನು ಸ್ಥಳೀಯ ಎಂಜಿನಿಯರ್‌ಗಳೆ ಏಕೆ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.


ಪ್ರಿಯಾಂಕಾ ಎಂಬುವರು, ಡೆವಲಪರ್‌ಗಳ ಎಂದು ಕರೆಯಿಸಿಕೊಳ್ಳುವವರಿಂದ ಸುಂದರವಾದ ಕೆರೆಯನ್ನು ಹಾಳು ಮಾಡುತ್ತಿರುವುದನ್ನು ನೋಡಿದರೆ ಬೇಸರವಾಗುತ್ತಿದೆ. ಅಧಿಕಾರಿಗಳು ಈ ದುರಂತದ ಪರಿಸ್ಥಿತಿ ವೇಳೆ ಕಣ್ಣು ಮುಚ್ಚಿ ಕುಳಿತಿರುವುದು ಎಂತಹ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಗಳಲ್ಲಿ ಕಸ ವಿಂಗಡಣೆ

ಕಡ್ಡಾಯಗೊಳಿಸಿ: ಆಯುಕ್ತ

ನಗರವನ್ನು ಸ್ವಚ್ಛವಾಗಿರಿಸಲು ಮತ್ತು ಡಂಪಿಂಗ್ ಯಾರ್ಡ್‌ಗಳ ಮೇಲಿನ ಅವಲಂಬನೆಯನ್ನು ತಪ್ಪಿಸಲು ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಘನತ್ಯಾಜ್ಯ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

ಇತ್ತೀಚಿಗೆ ಡಂಪಿಂಗ್ ಯಾರ್ಡ್ / ಭೂಭರ್ತಿ ಜಾಗಗಳಲ್ಲಿ ಸ್ಥಳೀಯ ನಿವಾಸಿಗಳ ಹೋರಾಟದಿಂದಾಗಿ ತ್ಯಾಜ್ಯ ವಿಲೇವಾರಿಯಲ್ಲಿ ಅಡೆತಡೆ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಮನೆಗಳಿಂದ ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ಗೊಬ್ಬರ ತಯಾರಿಸಲು ಸಂಸ್ಕರಣಾ ಘಟಕಗಳಿಗೆ ಕಳುಹಿಸಬೇಕು. ಒಣ ತ್ಯಾಜ್ಯವನ್ನು ಪುನರ್ಬಳಕೆ ಮಾಡಲು ಹಾಗೂ ವಿದ್ಯುತ್ ತಯಾರಿಕಾ ಘಟಕಗಳಿಗೆ ರವಾನಿಸಬೇಕು ಎಂದು ತಿಳಿಸಿದ್ದಾರೆ.

ಮಾರ್ಚ್ ಅಂತ್ಯದ ವೇಳೆ ಒಟ್ಟಾರೆ ಸಂಗ್ರಹವಾಗುವ ಕಸದಲ್ಲಿ ಶೇ. 65-70ರಷ್ಟು ಮೂಲದಲ್ಲೇ ವಿಂಗಡಣೆಯಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಪರಿವೀಕ್ಷಕರು, ಲಿಂಕ್ ವರ್ಕರ್ಸ್, ಮಾರ್ಷಲ್ಸ್ ಮತ್ತು ಪೌರಕಾರ್ಮಿಕರು ಶ್ರಮವಹಿಸಬೇಕೆಂದು ಅವರು ಸೂಚಿಸಿದ್ದಾರೆ.