ಕನ್ನಡಪ್ರಭ ವಾರ್ತೆ ವಿಜಯಪುರ
ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತಾಯಿ ಗಂಗಾಬಾಯಿ ಸಿದ್ದರಾಮಪ್ಪ ಪಾಟೀಲ (84) ಭಾನುವಾರ ಬೆಳಗಿನ ಜಾವ ನಿಧರಾಗಿದ್ದು, ಸಂಜೆ ಅಂತ್ಯಕ್ರಿಯೆ ನೆರವೇರಿತು.ಸಾರ್ವಜನಿಕರ ಅಂತಿಮ ದರ್ಶನಕ್ಕೆ ಜಮಖಂಡಿ ರಸ್ತೆಯಲ್ಲಿರುವ ಸಚಿವರ ತೋಟದ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 4-30ಕ್ಕೆ ಅಂತಿಮ ವಿಧಿವಿಧಾನಗಳ ಬಳಿಕ ಮೃತರ ಕೊನೆಯ ಪುತ್ರರಾದ ವಿಜುಗೌಡ ಪಾಟೀಲ ತೋಟದ ಮನೆ ಆವರಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮೃತರಿಗೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಶಿವಶರಣಗೌಡ ಪಾಟೀಲ ಹಾಗೂ ಪುತ್ರಿ ಮಹಾದೇವಿ ಪಾಟೀಲ ಸೇರಿದಂತೆ ಮೊಮ್ಮಕ್ಕಳು ಅಪಾರ ಬಂಧು-ಬಳಗವಿದೆ.
ಗಣ್ಯರಿಂದ ಅಂತಿಮ ದರ್ಶನ:ನಿಧನದ ಸುದ್ದಿ ತಿಳಿದು ವಿವಿಧ ಮಠಾಧೀಶರು, ಮಾಜಿ-ಹಾಲಿ ವಿವಿಧ ಸಂಸದರು, ಶಾಸಕರು, ರಾಜಕೀಯ ನಾಯಕರು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು, ಹಿರಿಯರಾದ ಗಂಗಾಬಾಯಿಯವರ ಅಂತಿಮ ದರ್ಶನ ಪಡೆದರು.
ಆಲಗೂರು ಪಂಚಮಸಾಲಿ ಪೀಠದ ಜಗದ್ಗುರುಗಳಾದ ಡಾ.ಮಹಾದೇವ ಶ್ರೀಗಳು, ಮುಗಳಖೋಡದ ಶ್ರೀಗಳು, ಮನಗೂಳಿ ಹಿರೇಮಠದ ಶ್ರೀಗಳು, ಚಿಮ್ಮಲಗಿ, ಮಸೂತಿ ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು, ರೈತ ಪರ ಹೋರಾಟಗಾರ ಶಶಿಕಾಂತ ಗುರೂಜಿ ಹಾಗೂ ಇತರರು ಮೃತರ ಅಂತಿಮ ದರ್ಶನ ಪಡೆದು, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸಿ.ಎಸ್. ನಾಡಗೌಡ (ಅಪ್ಪಾಜಿ), ಜೆ.ಟಿ.ಪಾಟೀಲ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಸುನಿಲಗೌಡ ಪಾಟೀಲ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಎಸ್.ಕೆ. ಬೆಳ್ಳುಬ್ಬಿ, ಮುರುಗೇಶ ನಿರಾಣಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜೆಡಿಎಸ್ ಮುಖಂಡರಾದ ಅಪ್ಪುಗೌಡ ಪಾಟೀಲ (ಮನಗೂಳಿ), ರೈತ ಮುಖಂಡರಾದ ಚುನ್ನಪ್ಪ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಕಾಂಗ್ರೆಸ್ ಹಾವೇರಿ ಜಿಲ್ಲಾಧ್ಯಕ್ಷರಾದ ಸಂಜೀವ ನೀರಲಗಿ, ಗಡ್ಡದದೇವರಮಠ, ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಬಿಜೆಪಿ ರಾಜ್ಯ ಮುಖಂಡ ಉಮೇಶ ಕಾರಜೋಳ ಸೇರಿದಂತೆ ಸಾವಿರಾರು ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ಸಚಿವ ಎಂ.ಬಿ.ಪಾಟೀಲ ಸಂತಾಪಬಸವನ ಬಾಗೇವಾಡಿ ಕ್ಷೇತ್ರದ ಶಾಸಕರು, ಸಚಿವ ಸಂಪುಟದ ಸಹೋದ್ಯೋಗಿಗಳು ಆಗಿರುವ ಶಿವಾನಂದ ಪಾಟೀಲ ಅವರ ತಾಯಿಯವರಾದ ಗಂಗಾಬಾಯಿ ಸಿದ್ದರಾಮಪ್ಪ ಪಾಟೀಲ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸಂತಪ ಸೂಚಿಸಿದ್ದಾರೆ.