ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಿವಾಜಿ ಜಯಂತಿ ಮೆರವಣಿ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ತಮ್ಮ ಸರ್ಕಾರ ಇದೆಯಂದು ಕೆಲವರನ್ನ ಮಾತ್ರ ಅರೆಸ್ಟ್ ಮಾಡಿದ್ದಾರೆ, ಉಳಿದವರನ್ನು ಅರೆಸ್ಟ್ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ಒಂದು ವೇಳೆ ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಮುಂದಾದರೆ ನಾವು ಸುಮ್ಮನಿರಲ್ಲ, ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮುಲು, ಸರ್ಕಾರ ಕತ್ತೆ ಕಾಯ್ತಿದೆಯಾ? ರಾಜ್ಯದಲ್ಲಿ ಲಾ ಅಂಡ್ ಅರ್ಡರ್ ಫೇಲ್ ಆಗಿದೆ. ಗೃಹ ಮಂತ್ರಿಗಳು ಏನೂ ಗೊತ್ತಿಲ್ಲ ಅಂತಾರೆ. ಈ ಸರ್ಕಾರ ಬಂದ್ಮೇಲೆ ಗಬ್ಬೆದ್ದು ಹೋಗಿದೆ ಎಂದು ಹರಿಹಾಯ್ದರು.
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ನೇರವಾಗಿ ಕಲ್ಲು, ಚಪ್ಪಲ್ಲಿ ತೂರಿದ್ದಾರೆ, ಹಿಂದೂ ಕಾರ್ಯಕರ್ತರು ಘೋಷಣೆ ಹಾಕುತ್ತ ಹೋಗುತ್ತಿದ್ದರೆ ಕಲ್ಲು, ಚಪ್ಪಲಿ ಎಸೆದಿದ್ದಾರೆ. ಕಲ್ಲು ಎಸ್.ಪಿ ಅವರಿಗೂ ಬಿದ್ದಿದೆ, ರಕ್ತ ಸುರಿದ್ದ್ದರೂ ಅವರು ಕಲ್ಲು ತೂರಾಟ ಒಪ್ಪಿಕೊಳ್ತಿಲ್ಲ, ಇಲ್ಲ ಒಂದು ಕಲ್ಲು ಬಿದ್ದಿದೆ, ನನಗೇನು ಆಗಿಲ್ಲ ಅಂತಾರೆ, ಧರ್ಮದಲ್ಲೇ ಶಿವಾಜಿ ಮಹಾರಾಜರ ಹೆಸರು ಇದೆ. ಕ್ಷುಲ್ಲಕ ಕಾರಣದಿಂದ ಅವರು ಕಲ್ಲು ತೂರಿದ್ದಾರೆ ಎಂದು ಆರೋಪಿಸಿದರು.ಕಿಡಿಗೇಡಿಗಳ ಬಂಧನ ಆಗಬೇಕು, ಜೈಲಿಗೆ ಹಾಕಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಸರ್ಕಾರ ದ್ವೇಷ ಹರಡುವವರ ಪರ ಇದೆ.ಈ ಬಗ್ಗೆ ನಾವು ಸೀರಿಯಸ್ ಆಗಿದ್ದೇವೆ. ಕಲ್ಲು ಎಸೆದ ತನ್ವೀರ್ ನಿಗೆ ಶಿಕ್ಷೆ ಆಗಬೇಕು, ಅವರನ್ನು ಬಿಟ್ಟು ನಮ್ಮ ಯುವಕರನ್ನು ಅರೆಸ್ಟ್ ಯಾಕೆ ಮಾಡ್ತೀರಿ ಎಂದು ಪ್ರಶ್ನಿಸಿದ ಶ್ರೀರಾಮುಲು ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಮುಂದಾದರೆ ನಾವೂ ಸುಮ್ಮನಿರಲ್ಲ ಎಂದರು.
ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ₹5 ಲಕ್ಷ ಪಡೆಯುವಂತಹ ಮನುಷ್ಯ ಅವರಲ್ಲ. ಯಾವ ಶಾಸಕರಾದರೂ ಐದು ಲಕ್ಷ ತೆಗೆದುಕೊಳ್ತಾರಾ. ಅವರು ವೈದ್ಯರು ಅವರಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಇದು ವ್ಯವಸ್ಥಿತ ಪ್ಲಾನ್, ಅವರನ್ನು ಸಿಲುಕಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.----
ಆಸ್ಪತ್ರೆಗೆ ಭೇಟಿ
ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಕಲ್ಲು ಎಸೆತ ಪ್ರಕರಣದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಓಡಿಸುವಾಗ ಬಿದ್ದು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತ ಅಶೋಕ ಬಾರಕೇರ ಆರೋಗ್ಯ ವಿಚಾರಸಿದ ಮಾಜಿ ಸಚಿವ ಶ್ರೀರಾಮುಲು ಸಾಂತ್ವನ ಹೇಳಿದರು.