ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಪರ್ಪ್ಯೂಂ ಗೋದಾಮಿಗೆ ಹೊತ್ತಿಕೊಂಡ ಬೆಂಕಿ ಸುತ್ತಲಿನ ಪ್ರದೇಶಕ್ಕೆ ಆವರಿಸಿಕೊಂಡು ಮುಗಿಲೆತ್ತರಕ್ಕೆ ದಟ್ಟಹೋಗೆ ಕಾಣಿಸಿಕೊಂಡ ಘಟನೆ ಬೆಂಗಳೂರು ಹೊರವಲಯ ಮಾಕಳಿ ಬಳಿಯ ಗೋದಾಮಿನಲ್ಲಿ ಭಾನುವಾರ ನಡೆದಿದ್ದು, ಒಳಗಿದ್ದ 40 ಮಂದಿ ಪೈಕಿ ಐವರು ಗಾಯೊಂಡಿದ್ದಾರೆ.ನಗರ ಹೊರವಲಯದಲ್ಲಿ ಲೋಕೇಶ್ ಎಂಬುವವರಿಗೆ ಸೇರಿದ ಗೋದಾಮುಗಳನ್ನು ಮೂರು ಖಾಸಗಿ ಕಂಪನಿಗಳಿಗೆ ಬಾಡಿಗೆ ನೀಡಲಾಗಿದ್ದು, ಅದರಲ್ಲಿ ಎಸಿ, ಫ್ರಿಡ್ಜ್, ಪರ್ಪ್ಯೂಂ ಸಂಗ್ರಹಿಸಲಾಗಿತ್ತು. ಭಾನುವಾರ ಬೆಳಗ್ಗೆ 11:30ರ ಸುಮಾರಿಗೆ ಮೊದಲು ಪರ್ಪ್ಯೂಂಗಳನ್ನು ಇಟ್ಟಿದ್ದ ಗೋದಾಮಿಗೆ ಬೆಂಕಿ ಹತ್ತಿದ್ದು, ಬಳಿಕ ಪರ್ಪ್ಯೂಂ ಗ್ಯಾಸ್ ಸ್ಫೋಟಗೊಂಡು ಅಕ್ಕಪಕ್ಕದ ಗೋದಾಮುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮುಗಿಲೆತ್ತರಕ್ಕೆ ದಟ್ಟಹೋಗೆ ಕಾಣಿಸಿಕೊಂಡು ಕೆಲಹೊತ್ತು ಆತಂಕ ಸೃಷ್ಟಿಯಾಗಿತ್ತು.
ಗೋದಾಮನಲ್ಲಿ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ಕಾರ್ಮಿಕರು ಕೂಡಲೇ ಹೊರಗೆ ಓಡಿ ಬಂದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಐವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಯಾವುದೇ ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಅಗ್ನಿ ಅವಘಡಕ್ಕೆ ಸಂಭವಿಸಿದೆ ಎನ್ನಲಾಗಿದೆ.ವಿಷಯ ತಿಳಿಯುತ್ತಿದ್ದಂತೆ ನೆಲಮಂಗಲ, ಪೀಣ್ಯಾ, ಯಶವಂತಪುರ ಸೇರಿದಂತೆ ವಿವಿಧ ಕಡೆಯಿಂದ ಬಂದ 15ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಅಗ್ನಿಶಾಮಕ ದಳದ ಅಧಿಕಾರಿ ಪುಟ್ಟಸ್ವಾಮಿ, ಎಸಿಪಿ ಅಶೋಕ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.