ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರು ರಸ್ತೆಯಲ್ಲಿ ದೀಪಾಂಜಲಿ ನಗರ ಜಂಕ್ಷನ್‌ನಿಂದ ನೈಸ್ ರಸ್ತೆಗೆ ಹೋಗುವ ವಾಹನಗಳು ಹಾಗೂ ರಿಂಗ್ ರಸ್ತೆ ಕಡೆ ಹೋಗುವ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವ 1.5 ಕಿ.ಮೀ ಉದ್ದದ ನೈಸ್ ಲಿಂಕ್ ರಸ್ತೆ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.

ಉದ್ಘಾಟನೆಗೆ ಸಜ್ಜಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಹೊಸ ರಸ್ತೆಯ ವಿಡಿಯೋ ಹಂಚಿಕೊಂಡಿರುವ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ, ಬೆಂಗಳೂರಿಗರೇ, ನಿಮ್ಮ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಳ್ಳುತ್ತಿದೆ. ನಮ್ಮ ನಗರದ ಅತ್ಯಂತ ಸುಂದರ ಹಾಗೂ ಸುಸಜ್ಜಿತ ನೈಸ್ ರಸ್ತೆಯ ಒಂದು ಭಾಗವು ಶೀಘ್ರದಲ್ಲೇ ನಿಮ್ಮ ಸೇವೆಗೆ ಮುಕ್ತವಾಗಲಿದೆ. ದೀಪಾಂಜಲಿನಗರ ಜಂಕ್ಷನ್‌ನಿಂದ ನೈಸ್ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುವ ಈ ಹೊಸ ರಸ್ತೆಯು ನಿಮ್ಮ ಪ್ರಯಾಣವನ್ನು ಮತ್ತಷ್ಟು ಸುಗಮ, ವೇಗ ಮತ್ತು ಆನಂದದಾಯಕವಾಗಿಸಲಿದೆ ಎಂದಿದ್ದಾರೆ.

ಟ್ರಾಫಿಕ್ ದಟ್ಟಣೆಗೆ ಪರಿಹಾರ:

ನೂತನ ಲಿಂಕ್ ರಸ್ತೆಯನ್ನು ಪ್ರವೇಶಿಸಿದರೆ ರಿಂಗ್ ರಸ್ತೆಯ ಜೊತೆಗೆ ನೈಸ್ ರಸ್ತೆಯಲ್ಲಿ ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆಗಳನ್ನು ತಲುಪಬಹುದು. ಇದರಿಂದ ಒಳಭಾಗದ ರಸ್ತೆಗಳಲ್ಲಿ ಸಿಗ್ನಲ್, ಟ್ರಾಫಿಕ್ ದಟ್ಟಣೆಯಿಂದ ಪಾರಾಗಬಹುದಾಗಿದೆ. ಹಾಲಿ ವಾಹನಗಳು ದೀಪಾಂಜಲಿ ನಗರ ಸಿಗ್ನಲ್‌ನಿಂದ ನಾಯಂಡಹಳ್ಳಿ ಜಂಕ್ಷನ್‌ಗೆ ತೆರಳಿ, ಎಡ ತಿರುವು ಪಡೆದು ರಿಂಗ್ ರಸ್ತೆಯ ಮೂಲಕ ನೈಸ್ ರಸ್ತೆ ಪ್ರವೇಶಿಸಬೇಕಾಗಿತ್ತು ಇನ್ನು ಮುಂದೆ ದೀಪಾಂಜಲಿ ನಗರ ಜಂಕ್ಷನ್‌ ಮೂಲಕವೇ ಸಂಚರಿಸಬಹುದು.ಆದರೆ, ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಉಂಟಾಗುತ್ತಿದ್ದ ದಟ್ಟಣೆ ಈಗ ದೀಪಾಂಜಲಿ ನಗರ ಜಂಕ್ಷನ್‌ಗೆ ಸ್ಥಳಾಂತರವಾಗುತ್ತದೆ ಎನ್ನುವ ಆತಂಕವೂ ಎದುರಾಗಿದೆ.