ಕನ್ನಡಪ್ರಭ ವಾರ್ತೆ ಬೆಂಗಳೂರು

ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ವಾರಗಿತ್ತಿ ಕುಟುಂಬದ ನಡುವೆ ಉಂಟಾಗಿರುವ ಕಲಹ ಸಂಬಂಧ ಸಿ.ಸಿ ಕ್ಯಾಮೆರಾ ದೃಶ್ಯಗಳನ್ನು ಕಾವ್ಯಾ ಗೌಡ ಅವರು ಬಿಡುಗಡೆ ಮಾಡಿದ್ದಾರೆ.

ನಟಿಯ ಕುಟುಂಬದ ಕಲಹ ಸಾರ್ವಜನಿಕ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ತಮ್ಮ ವಿರುದ್ಧ ಹೊರಿಸಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ನಟಿ ಕಾವ್ಯಗೌಡ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಸಿಸಿ ಕ್ಯಾಮೆರಾ ದೃಶ್ಯಗಳನ್ನೂ ಕೋರ್ಟ್‌ಗೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ತಮ್ಮ ಮೇಲೆ ವಾರಗಿತ್ತಿ ಪ್ರೇಮಾ ಚಪ್ಪಲಿ ಎಸೆದಿರುವ ಬಗ್ಗೆ ಹಾಗೂ ಪ್ರೇಮಾ ತಂಗಿ ಪ್ರೀಯಾ ಹಲ್ಲೆ ಮಾಡಿರುವ ಬಗ್ಗೆ ನಟಿ ಕಾವ್ಯಗೌಡ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನೀವು ಬರೀ ಒನ್‌ ಸೈಡ್‌ ಕಥೆ ಮತ್ತು ಸುಳ್ಳು ಆರೋಪಗಳನ್ನ ಮಾತ್ರ ಕೇಳಿದ್ದೀರಿ. ಇದೀಗ ನಾನು ಸತ್ಯವನ್ನ ಹೊರಗೆ ಹಾಕಬೇಕು. ಇದರ ಹಿಂದಿರುವ ಕ್ರೂರ ಮುಖಗಳನ್ನು ನಾನು ಹೊರಗೆ ತರಬೇಕು ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಾವ್ಯ ಗೌಡ ಬರೆದುಕೊಂಡಿದ್ದಾರೆ.


ಸತ್ಯ ಹೊರಬರಲು ವಿಡಿಯೋ ಬಿಡುಗಡೆ ಮಾಡಿದೆ: ಈ ಕುರಿತು ಮಾತನಾಡಿರುವ ಕಾವ್ಯಾ ಗೌಡ ಅವರು, “ನಾನು 26ನೇ ತಾರೀಖು ನಡೆದ ಘಟನೆಯ ಬಗ್ಗೆ ವಿಡಿಯೋವನ್ನು ಈಗ ಹಂಚಿಕೊಂಡಿದ್ದೇನೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳು ಮತ್ತು ಅದರಲ್ಲಿ ಉಂಟಾದ ಗೊಂದಲಗಳಿಗೆ ಸ್ಪಷ್ಟನೆ ನೀಡುವುದು ನನ್ನ ಉದ್ದೇಶ. ಘಟನೆ ನಡೆದ ತಕ್ಷಣವೇ ವಿಡಿಯೋ ಬಿಡುಗಡೆ ಮಾಡಿದ್ದರೆ, ಆಗ ‘ಅಯ್ಯೋ ಪಾಪ ಕಾವ್ಯ’ ಎಂದು ಎಲ್ಲರೂ ಸಹಾನುಭೂತಿ ತೋರಿಸುತ್ತಿದ್ದರು. ಆದರೆ ನನ್ನ ವಕೀಲರು ಕಾನೂನು ಪ್ರಕ್ರಿಯೆಯ ಕಾರಣದಿಂದಾಗಿ ವಿಡಿಯೋ ಬಿಡುಗಡೆ ಮಾಡದಂತೆ ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ.