ಕಿತ್ತೂರು ಕರ್ನಾಟಕಕ್ಕೆ 10 ಸಾವಿರ ಕೋಟಿ ಬೇಡಿಕೆ!

KannadaprabhaNewsNetwork |  
Published : Dec 07, 2025, 03:15 AM IST
45456 | Kannada Prabha

ಸಾರಾಂಶ

ಈ ವರ್ಷ ಅತಿ ಹೆಚ್ಚು ಮಳೆ ಎದುರಿಸಿದ್ದು ಕಿತ್ತೂರ ಹಾಗೂ ಕಲ್ಯಾಣ ಕರ್ನಾಟಕ. ಲಕ್ಷಗಟ್ಟಲೇ ಹೆಕ್ಟೇರ್‌ ಪ್ರದೇಶದ ಬೆಳೆ ನೀರು ಪಾಲಾಗಿದೆ. ಬೆಳೆಹಾನಿ, ಮನೆ ಹಾನಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಈ ವರೆಗೆ ದೊರಕಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕಲ್ಯಾಣ ಕರ್ನಾಟಕಕ್ಕೆ 370 ಜೆ ಕಲಂನಿಂದಾಗಿ ಹೆಚ್ಚಿನ ಅನುದಾನ ಸಿಗುತ್ತದೆ. ಕಿತ್ತೂರ ಕರ್ನಾಟಕಕ್ಕೆ ಕನಿಷ್ಠ ₹10 ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆಗೆ ಈ ಚಳಿಗಾಲದ ಅಧಿವೇಶನದಲ್ಲಿ ಘೋಷಣೆಯಾಗಬೇಕು ಎನ್ನುವ ಬೇಡಿಕೆ ಕೇಳಿ ಬಂದಿದೆ.

ಈ ವರ್ಷ ಅತಿ ಹೆಚ್ಚು ಮಳೆ ಎದುರಿಸಿದ್ದು ಕಿತ್ತೂರ ಹಾಗೂ ಕಲ್ಯಾಣ ಕರ್ನಾಟಕ. ಲಕ್ಷಗಟ್ಟಲೇ ಹೆಕ್ಟೇರ್‌ ಪ್ರದೇಶದ ಬೆಳೆ ನೀರು ಪಾಲಾಗಿದೆ. ಬೆಳೆಹಾನಿ, ಮನೆ ಹಾನಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಈ ವರೆಗೆ ದೊರಕಿಲ್ಲ. ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಮಾಡಿದಂತೆ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ವರೆಗೆ ಪರಿಹಾರ ಸಿಗುವಂತಾಗಬೇಕು. ಬೆಳೆಹಾನಿಗೂ ಹೆಚ್ಚಿನ ಪರಿಹಾರ ಕೊಡಬೇಕು ಎಂಬುದ ಸಂತ್ರಸ್ತರ ಆಗ್ರಹವಾಗಿದೆ.ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆ ಭರಪೂರ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ದರವೇ ಇಲ್ಲ. ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹ ರೈತಾಪಿ ವರ್ಗದ್ದು. ಕೇಂದ್ರ ಸರ್ಕಾರ ರಾಜ್ಯವೇ ಖರೀದಿ ಕೇಂದ್ರ ತೆರೆದು ಖರೀದಿಸಲಿ ಎಂದು ಸ್ಪಷ್ಟಪಡಿಸಿದೆ. ಹಾವೇರಿ, ಗದಗ, ಲಕ್ಷ್ಮೇಶ್ವರ, ಧಾರವಾಡ, ನವಲಗುಂದದಲ್ಲಿ ರೈತರು ಬೃಹತ್‌ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಹೀಗಾಗಿ ಕೆಲವೆಡೆ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ನೋಂದಣಿ ಪ್ರಾರಂಭಿಸಿದೆ. ಇದನ್ನು ರಾಜ್ಯಾದ್ಯಂತ ವಿತರಿಸಬೇಕೆಂದು ರೈತರ ಬೇಡಿಕೆಯಾಗಿದೆ. ಇದರೊಂದಿಗೆ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸರ್ಕಾರ ಇತ್ಯರ್ಥಪಡಿಸಬೇಕಾಗಿದೆ.

ನೀರಾವರಿಗೆ ಆದ್ಯತೆ:ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದು, ತುಂಗಭದ್ರಾ ಜಲಾಶಯಕ್ಕೆ ಸಮಾನಂತರ ಅಣೆಕಟ್ಟೆ ನಿರ್ಮಿಸುವ ಕುರಿತು ಹಲವು ವರ್ಷಗಳಿಂದ ಚರ್ಚೆಗಳಾಗುತ್ತಿವೆಯೇ ಹೊರತು ನಿರ್ಣಯಕ್ಕೆ ಬರುತ್ತಿಲ್ಲ. ಹೀಗಾಗಿ ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಮಳೆಗಾಲದಲ್ಲಿ ತನ್ನ ಇಕ್ಕೆಲ್ಲಗಳಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಬೆಳೆಯನ್ನು ಆಹುತಿಗೆ ಪಡೆಯುವ ಬೆಣ್ಣೆಹಳ್ಳದ ಪ್ರವಾಹ ತಡೆಗೆ ₹ 200 ಕೋಟಿ ಅನುದಾನವೇನೂ ನೀಡಲಾಗಿದೆ. ಆದರೆ, ಈ ವರೆಗೂ ಕಾಮಗಾರಿ ಶುರುವಾಗಿಲ್ಲ. ಅತ್ತ ತುಪರಿಹಳ್ಳಕ್ಕೆ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಬೇಕಿದ್ದು ಈ ಕುರಿತು ಈ ಭಾಗದ ಜನಪ್ರತಿನಿಧಿಗಳು ಧ್ವನಿಯಾಗಬೇಕೆಂದು ರೈತರ ಒತ್ತಾಸೆಯಾಗಿದೆ.

ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ:

ಬೆಂಗಳೂರು ಬಳಿಕ ಹುಬ್ಬಳ್ಳಿ-ಧಾರವಾಡ ಬೃಹತ್‌ ನಗರವಾಗಿದ್ದರೂ ಅಭಿವೃದ್ಧಿ ಗೌಣವಾಗಿದೆ. ಡಾಂಬರು ಕಾಣದ ರಸ್ತೆ, ಮಳೆ ಬಂದರೆ ಕೆಸರು, ಮಳೆ ಬಂದರೆ ಧೂಳಿನಿಂದ ಕಂಗೆಡುವ ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಾಗಿದೆ. ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫ್ಲೈಒವರ್‌ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ವೇಗ ನೀಡಬೇಕಿದೆ. ಹುಬ್ಬಳ್ಳಿ-ಧಾರವಾಡ ನಡುವೆ ತ್ವರಿತ ಸಾರಿಗೆ ಸೌಲಭ್ಯ ಒದಗಿಸಲು ಜಾರಿಗೆ ತಂದಿದ್ದ ಬಿಆರ್‌ಟಿಎಸ್‌ ಪರ-ವಿರೋಧ ವ್ಯಕ್ತವಾಗಿದ್ದು ಇದೀಗ ಬಿಆರ್‌ಟಿಎಸ್‌ ರದ್ದುಪಡಿಸಿ ಇಆರ್‌ಟಿ ಓಡಿಸಬೇಕೆಂಬು ಕೂಗು ಸಹ ಕೇಳಿ ಬಂದಿದೆ. ಈ ಕುರಿತು ಸಹ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದಲ್ಲದೇ, ನಿರಂತರ ನೀರು, ರಸ್ತೆ, ನೀರಾವರಿ ಹೀಗೆ ಈ ಭಾಗದ ಸಮಸ್ಯೆಗಳಿಗೆ ಅಧಿವೇಶನ ಕಿವಿಯಾಗಬೇಕು. ಪರಿಹಾರವೂ ಸಿಗುವಂತಾಗಬೇಕು. ಈ ಮೂಲಕ ಪ್ರತ್ಯೇಕ ರಾಜ್ಯದ ಕೂಗನ್ನು ತಣ್ಣಗಾಗಿಸಬೇಕು ಎಂಬುದು ಈ ಭಾಗದ ಜನರ ಒಕ್ಕೊರಲಿನ ಆಗ್ರಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆದರ್ಶ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದು: ನ್ಯಾಯಾಧೀಶೆ ನಾಗವೇಣಿ
ಅಂಬೇಡ್ಕರ್ ಸಮಾಜ ಸುಧಾರಣೆಯ ಮಾದರಿ ಅನನ್ಯ: ಮರಿರಾಮಪ್ಪ