ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಂಚಾಕ್ಷರಯ್ಯ ಕಾರಿಗೆ ಯಮನಾಗಿ ಬಂದ ಶ್ವಾನ!

KannadaprabhaNewsNetwork |  
Published : Dec 07, 2025, 03:15 AM IST
464 | Kannada Prabha

ಸಾರಾಂಶ

ಪಂಚಾಕ್ಷರಯ್ಯ ಅವರು ಹುಬ್ಬಳ್ಳಿಯಿಂದ ಅಣ್ಣಿಗೇರಿ ಮಾರ್ಗವಾಗಿ ಗದಗಗೆ ಕಾರು ಚಲಾಯಿಸಿಕೊಂಡು ವೇಗವಾಗಿ ತೆರಳುತ್ತಿದ್ದ ವೇಳೆ ಭದ್ರಾಪುರ ಬಳಿಯ ಆರೇರ್‌ ಬ್ರಿಡ್ಜ್‌ ಹತ್ತಿರ ದಿಢೀರ್‌ ಶ್ವಾನ ಅಡ್ಡ ಬಂದಿದೆ. ಇದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿದೆ.

ಹುಬ್ಬಳ್ಳಿ:

ವಿವಾಹ ಕಾರ್ಯ ಮುಗಿಸಿಕೊಂಡು ಗದಗಗೆ ಕಾರಿನಲ್ಲಿ ತೆರಳುತ್ತಿದ್ದ ಹಾವೇರಿ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಂಚಾಕ್ಷರಯ್ಯ ಸಾಲಿಮಠ ಅವರಿಗೆ ಯಮನಾಗಿ ಬಂದಿದ್ದು ಶ್ವಾನ!

ದುರ್ಘಟನೆಗೆ ರಸ್ತೆ ಮಾರ್ಗಮಧ್ಯದಲ್ಲಿ ಶ್ವಾನ ಬಂದಿದ್ದೇ ಕಾರಣ ಎಂಬುದು ಎಫ್‌ಐಆರ್‌ನಲ್ಲಿ ದಾಖಲಾಗಿರುವ ಮಾಹಿತಿಯಿಂದ ತಿಳಿದುಬಂದಿದೆ.

ಪಂಚಾಕ್ಷರಯ್ಯ ಅವರು ಹುಬ್ಬಳ್ಳಿಯಿಂದ ಅಣ್ಣಿಗೇರಿ ಮಾರ್ಗವಾಗಿ ಗದಗಗೆ ಕಾರು ಚಲಾಯಿಸಿಕೊಂಡು ವೇಗವಾಗಿ ತೆರಳುತ್ತಿದ್ದ ವೇಳೆ ಭದ್ರಾಪುರ ಬಳಿಯ ಆರೇರ್‌ ಬ್ರಿಡ್ಜ್‌ ಹತ್ತಿರ ದಿಢೀರ್‌ ಶ್ವಾನ ಅಡ್ಡ ಬಂದಿದೆ. ಇದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿದೆ. ಇದರಿಂದ ಕಾರಿನಲ್ಲಿ ಬೆಂಕಿ ಆವರಿಸಿಕೊಂಡು ಕಾರಿನಿಂದ ಹೊರಬರದೆ ಸಜೀವ ದಹನವಾಗಿದ್ದಾರೆ.

ಫೈಲ್‌ ತರಲು ಹೋಗುತ್ತಿದ್ದರು:

ಪ್ರಕರಣವೊಂದರ ಕುರಿತು ಬೈಲಹೊಂಗಲದ ಕೋರ್ಟ್‌ನಲ್ಲಿ ಕೇಸ್ ಇತ್ತು. ಈ ಹಿನ್ನೆಲೆಯಲ್ಲಿ ಪಂಚಾಕ್ಷರಯ್ಯ ಅವರು ಮದುವೆ ಕಾರ್ಯ ಮುಗಿಸಿಕೊಂಡು ಗದಗನ ನಿವಾಸದಲ್ಲಿದ್ದ ಕೇಸ್‌ ಫೈಲ್‌ನ್ನು ತೆಗೆದುಕೊಂಡು ಬೈಲಹೊಂಬಲಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತಮ್ಮ ಕಾರಿನಲ್ಲಿ ಗದಗನತ್ತ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ನಡೆದಿರುವುದಾಗಿ ಪಂಚಾಕ್ಷರಯ್ಯ ಅವರ ಪತ್ನಿ ಶೀಲಾ ಸಾಲಿಮಠ ಅಣ್ಣಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೃತ ಇನ್‌ಸ್ಪೆಕ್ಟರ್‌ ಸಾಲಿಮಠಗೆ ಅಂತಿಮ ನಮನಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಸಜೀವ ದಹನವಾದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗಾವಿ ಜಿಲ್ಲೆಯ ಮುರಗೋಡ ಗ್ರಾಮಕ್ಕೆ ರವಾನಿಸಲಾಯಿತು.ಘಟನೆಯ ನಂತರ ಶುಕ್ರವಾರ ರಾತ್ರಿ ಮೃತದೇಹವನ್ನು ಇಲ್ಲಿಯ ಕೆಎಂಸಿಆರ್‌ಐ ಶವಗಾರಕ್ಕೆ ರವಾನಿಸಲಾಗಿತ್ತು. ಶನಿವಾರ ಬೆಳಗ್ಗೆ ವೈದ್ಯರು ಮೃತದೇಹವನ್ನು ಪರಿಶೀಲಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ವೇಳೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ, ಎಸ್‌ಪಿ ಗುಂಜನ್ ಆರ್ಯ, ಡಿಸಿಪಿ ಮಹಾನಿಂಗ ನಂದಗಾವಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ, ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಸಾಗಿಸಲು ಪೂರಕ ವ್ಯವಸ್ಥೆ ಕಲ್ಪಿಸಿದರು.

ಇದೇ ವೇಳೆ ಹು-ಧಾ ಪೊಲೀಸ್ ಕಮಿಷನರೇಟ್‌ನಿಂದ ಕಮಿಷನರ್ ನೇತೃತ್ವದಲ್ಲಿ ಅಂತಿಮ ನಮನ ಸಲ್ಲಿಸಿ ಗೌರವ ಸೂಚಿಸಿದರು. ಜಿಲ್ಲಾ ಪೊಲೀಸ್ ಘಟಕದಿಂದ ಎಸ್‌ಪಿ ನೇತೃತ್ವದಲ್ಲಿ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ಕೆಎಂಸಿಆರ್‌ಐನಿಂದ ಹೊರಟ ಮೃತದೇಹಕ್ಕೆ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲೂ ಪಿಐ ನೇತೃತ್ವದಲ್ಲಿ ಗೌರವ ಸಮರ್ಪಣೆ ನಡೆಯಿತು. ನಂತರ ಧಾರವಾಡ ಜಿಲ್ಲಾ ಪೊಲೀಸ್ ಘಟಕದ ಗರಗ ಪೊಲೀಸ್ ಠಾಣೆಯಲ್ಲೂ ಸಿಪಿಐ ಶಿವಯೋಗಿ ಲೋಹಾರ ನೇತೃತ್ವದಲ್ಲಿ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ಅಲ್ಲಿಂದ ನೇರ ಬೈಲಹೊಂಗಲ ಮಾರ್ಗವಾಗಿ ಸ್ವಗ್ರಾಮ ಮುರಗೋಡಕ್ಕೆ ಸಾಗಿಸಲಾಯಿತು. ನಂತರ ಧಾರ್ಮಿಕ ವಿಧಿ-ವಿಧಾನ ಮತ್ತು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ತೂರು ಬಸಿಲಿಕಾ ಮಹೋತ್ಸವ: ಹರಿದು ಬಂದ ಭಕ್ತಸಾಗರ
ಕಬಡ್ಡಿ ಶಕ್ತಿ, ಯುಕ್ತಿಯಿಂದ ಆಡುವ ಆಟ: ಡಾ. ಅನ್ನದಾನೀಶ್ವರ ಸ್ವಾಮೀಜಿ