ಉಪ್ಪಿನಂಗಡಿಯಲ್ಲಿ ಹಾಡಹಗಲೇ ಗೃಹಿಣಿ ಹತ್ಯೆಗೆ ಹತ್ತು ವರ್ಷ: ಇನ್ನೂ ಪತ್ತೆಯಾಗದ ಹಂತಕರು

KannadaprabhaNewsNetwork | Published : Jun 7, 2024 12:31 AM

ಸಾರಾಂಶ

ಪುಷ್ಪಲತಾ ಕೊಲೆ ಪ್ರಕರಣದ ಹಂತಕರನ್ನು ಪತ್ತೆ ಹಚ್ಚಲು ಆಗ್ರಹಿಸಿ ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರೂ ಈ ಹತ್ತು ವರ್ಷದ ಅವಧಿಯಲ್ಲಿ ಯಾವುದೇ ಫಲಶ್ರುತಿ ಕಾಣಿಸದಿರುವುದು ವ್ಯವಸ್ಥೆಯೊಳಗಿನ ದೋಷವಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಹಾಡಹಗಲೇ ಪುಷ್ಪಲತಾ (೩೪) ಎಂಬ ಗೃಹಿಣಿಯನ್ನು ಉಪ್ಪಿನಂಗಡಿಯಲ್ಲಿ ಕತ್ತು ಇರಿದು ಕೊಲೆಗೈದ ಪ್ರಕರಣಕ್ಕೆ ಇಂದಿಗೆ ಹತ್ತು ವರ್ಷ ಪೂರ್ಣಗೊಂಡರೂ ಪೊಲೀಸ್ ಇಲಾಖೆಗೆ ಹಂತಕರನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ.

ಅಂದು ಪುತ್ತೂರು ತಾಲೂಕಿನ ಹಿರೆಬಂಡಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಗುರುಮೂರ್ತಿ ಎಂಬವರ ಪತ್ನಿ, ಇಬ್ಬರು ಮಕ್ಕಳ ತಾಯಿ ಪುಷ್ಪಲತಾ ಅವರನ್ನು ವಾಸ್ತವ್ಯವಿದ್ದ ಉಪ್ಪಿನಂಗಡಿ ಕ್ರೈಸ್ತ ದೇಗುಲದ ಒಡೆತನದ ಬಾಡಿಗೆ ಮನೆಯಲ್ಲಿ 2014ರ ಜೂನ್‌ 5ರಂದು ಕತ್ತು ಇರಿಯಲ್ಪಟ್ಟ ಸ್ಥಿತಿಯಲ್ಲಿ ಕೊಲೆ ಮಾಡಲಾಗಿತ್ತು.

ಘಟನೆ ವಿವರ: ಪತಿ, ಮಕ್ಕಳು ಶಾಲೆಗೆ ಹೋದ ಬಳಿಕ ಎಂದಿಂನಂತೆ ಪುಷ್ಪಲತಾ ಅವರು ಬಟ್ಟೆ ಒಗೆಯುತ್ತಿದ್ದರು. ಅವರನ್ನು ಪರಿಚಯಸ್ಥನೋ, ನೆಂಟನೋ ಕೊಲೆಗೈದಿರುವ ಸಾಧ್ಯತೆಯನ್ನು ಮನೆಯಲ್ಲಿ ಕಂಡು ಬಂದ ತುಂಪು ಪಾನೀಯ ಲೋಟ ಅನುಮಾನ ತಂದಿತ್ತು. ಮನೆಯ ಅಡುಗೆ ಕೋಣೆಯಲ್ಲಿ ಕೊಲೆಯಾಗಿ ಬಿದ್ದಿದ್ದ ಪುಷ್ಪಲತಾ ಅವರು ಧರಿಸಿದ ಬಟ್ಟೆಯ ಮೇಲ್ಭಾಗದಲ್ಲಿ ರಕ್ತದಕಲೆ ಕಂಡು ಬರಲಿಲ್ಲ. ಹಂತಕ ಪ್ರಜ್ಞೆ ತಪ್ಪಿಸಿ ಈ ಕೃತ್ಯವೆಸಗಿರುವ ಸಾಧ್ಯತೆಯನ್ನೂ ಶಂಕಿಸುವಂತಿತ್ತು.

ಮರಣೋತ್ತರ ಪರೀಕ್ಷಾ ವರದಿಯೂ ತನಿಖೆಗೆ ಸಹಕಾರಿಯಾಗಲಿಲ್ಲ?: ಗೃಹಿಣಿ ಪುಷ್ಪಲತಾ ಕೊಲೆಯ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಪುತ್ತೂರಿನ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠರನ್ನು ಒತ್ತಾಯಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ಶವದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಪ್ರತಿಷ್ಠಿತ ವೈದ್ಯ ಸಂಸ್ಥೆಯಲ್ಲಿ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆ ತನಿಖೆಯಲ್ಲಿ ಫಲಿತಾಂಶವನ್ನು ಒದಗಿಸಲು ಸಹಕಾರಿಯಾಗಿಲ್ಲ ಎನ್ನುವುದು ಈ ವರೆಗಿನ ಬೆಳವಣಿಗೆಯಿಂದ ದೃಢಪಟ್ಟಿದೆ.

ಕೊಲೆಗೀಡಾದ ಶವದ ಮರಣೋತ್ತರ ಪರೀಕ್ಷೆ ನಡೆಸುವಾಗ ಶವದ ಅಂಗಾಂಗಗಳ ಸ್ಥಿತಿಗತಿಯನ್ನಾಧರಿಸಿ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ದಾಖಲಿಸುವುದು ಸಾಮಾನ್ಯ ನಡೆಯಾಗಿದೆ. ಆದರೆ, ಈ ಪ್ರಕರಣದಲ್ಲಿ ವೈದ್ಯಾಧಿಕಾರಿಗಳ ತಂಡವೊಂದು ಘಟನಾ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿರಲಿಲ್ಲ.

ಅಪರಿಚಿತರು ಬಂದಿದ್ದಲ್ಲಿ ಅವರನ್ನು ಮನೆಯೊಳಗೆ ಕರೆದು ಪಾನೀಯವನ್ನು ನೀಡುವ ಸಾಧ್ಯತೆ ಇಲ್ಲ. ಮನೆಯಲ್ಲಿ ಕಂಡು ಬಂದ ತಂಪು ಪಾನೀಯ ಲೋಟದಿಂದ ಪರಿಚಿತ ವ್ಯಕ್ತಿಯೇ ಹತ್ಯೆ ಮಾಡಿರಬಹುದೆಂಬ ಸಾಧ್ಯತೆ ದಟ್ಟವಾಗಿತ್ತು. ಮಾತ್ರವಲ್ಲದೆ ಪುಷ್ಪಲತಾ ಅವರು ಬಟ್ಟೆ ಒಗೆಯುತ್ತಿದ್ದವರು ಮನೆಗೆ ಬಂದ ವ್ಯಕ್ತಿಯನ್ನು ಮನೆಯೊಳಗೆ ಕರೆದು ಅರ್ಧಕ್ಕೇ ಬಟ್ಟೆ ಒಗೆಯುವುದನ್ನು ಬಿಟ್ಟಿ ತೆರಳಿರುವುದು ಕಂಡುಬಂದಿತ್ತು.

ಪುಷ್ಪಲತಾ ಕೊಲೆ ಪ್ರಕರಣದ ಹಂತಕರನ್ನು ಪತ್ತೆ ಹಚ್ಚಲು ಆಗ್ರಹಿಸಿ ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರೂ ಈ ಹತ್ತು ವರ್ಷದ ಅವಧಿಯಲ್ಲಿ ಯಾವುದೇ ಫಲಶ್ರುತಿ ಕಾಣಿಸದಿರುವುದು ವ್ಯವಸ್ಥೆಯೊಳಗಿನ ದೋಷವಾಗಿದೆ.

ತನಿಖೆ ಪ್ರಸಕ್ತ ಅಡಿಷನಲ್ ಎಸ್ಪಿಯವರ ಮೇಜಲ್ಲಿದೆ ಈ ಪ್ರಕರಣದ ತನಿಖೆಯನ್ನು ಎಲ್ಲ ಸ್ತರದಲ್ಲಿ ನಡೆಸಲಾಗಿದ್ದರೂ ಹಂತಕರ ಸುಳಿವು ಪಡೆಯಲು ಸಾಧ್ಯವಾಗಲಿಲ್ಲ. ಮೇಲ್ನೋಟಕ್ಕೆ ಇದು ಪತ್ತೆಯಾಗದ ಪ್ರಕರಣವಾಗಿದ್ದರೂ, ಪ್ರಸಕ್ತ ಇದು ಅಡಿಷನಲ್ ಎಸ್ಪಿ ಅವರ ನೇತೃತ್ವದ ತನಿಖಾ ವ್ಯಾಪ್ತಿಯಲ್ಲಿದೆ ಎಂದು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಮಹಿಳಾ ಸಂಘಟನೆಗಳು ಅಂದು ಬೀದಿಗಿಳಿದು ಹೋರಾಟ ನಡೆಸಿದ್ದವು. ಹಂತಕರನ್ನು ಬಂಧಿಸಲು ಇಲಾಖಾಧಿಕಾರಿಗಳಿಗೆ ಒತ್ತಡವನ್ನೇರಿದ್ದವು. ಆದರೆ ಈ ಹತ್ತು ವರ್ಷಗಳಲ್ಲಿ ಅದ್ಯಾವುದೂ ಫಲಕಾರಿಯೆನಿಸಲಿಲ್ಲ. ಹಂತಕ ಪತ್ತೆಯಾಗಲಿಲ್ಲ ಎನ್ನುವುದೇ ಬೇಸರ ಮೂಡಿಸಿದೆ ಎಂದು ಅಂದಿನ ಹೋರಾಟಗಾರ್ತಿ ಉಷಾ ಮುಳಿಯ ಪ್ರತಿಕ್ರಿಯಿಸಿದ್ದಾರೆ.

Share this article