ಶೀಘ್ರದಲ್ಲೇ ಕೆಐಎಡಿಬಿಗೆ ನೂರು ಎಕರೆ ಭೂಮಿ: ಪಿ.ರವಿಕುಮಾರ್

KannadaprabhaNewsNetwork |  
Published : Nov 28, 2026, 12:30 AM IST
೨೭ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಮಿಮ್ಸ್ ಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾವಚಿತ್ರಕ್ಕೆ ಪಟ್ಟಿ ಅಂಟಿಸಿರುವುದನ್ನು ನಾನು ಖಂಡಿಸುತ್ತೇನೆ. ಆದರೆ, ಇದನ್ನು ಕಾಂಗ್ರೆಸ್‌ನವರ ತಲೆಗೆ ಕಟ್ಟುವುದನ್ನು ನಾನು ಒಪ್ಪುವುದಿಲ್ಲ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಅಧಿಕಾರಿಗಳು ನಾಟಕ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ೧೦೦ ಎಕರೆ ಭೂಮಿಯನ್ನು ಕ್ಯಾಬಿನೆಟ್‌ಗೆ ತಂದು ಶೀಘ್ರದಲ್ಲೇ ಕೆಐಎಡಿಬಿಗೆ ಹಸ್ತಾಂತರ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಭೂಮಿ ಕೊಡುವ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ಜಿಲ್ಲೆಗೆ ಕೈಗಾರಿಕೆ ಬರಬೇಕೆಂಬ ಆಸೆ ನಮಗೂ ಇದೆ. ಎಆರ್‌ಎಐ ಸಂಸ್ಥೆಯವರು ಒಪ್ಪಿಗೆ ನೀಡಿರುವ ಮುದ್ದನಘಟ್ಟ- ಹೆಗ್ಗಡತಿಹಳ್ಳಿ ಬಳಿಯ ೧೦೦ ಎಕರೆ ಭೂಮಿಯನ್ನು ಹಸ್ತಾಂತರ ಮಾಡಬಹುದೆಂದು ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ರವಾನಿಸಿದೆ. ಅದನ್ನು ಕ್ಯಾಬಿನೆಟ್‌ಗೆ ತಂದು ಕೆಐಎಡಿಬಿಗೆ ಹಸ್ತಾಂತರಿಸಬೇಕೆಂದರೆ ಒಂದರಿಂದ ಒಂದೂವರೆ ತಿಂಗಳು ಸಮಯ ಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇವರು ಮೊದಲೇ ನೂರು ಎಕರೆ ಭೂಮಿ ಕೇಳಿದ್ದರೆ ಆಗಲೇ ಕೊಡುತ್ತಿದ್ದೆವು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲೇ ಬೆಂಗಳೂರಿನಲ್ಲಿ ಸಭೆ ಕರೆದಾಗ ನನಗೆ ೧೦೦ ಎಕರೆಯಲ್ಲ, ೫೦೦ ಎಕರೆ ಭೂಮಿ ಬೇಕು ಎಂದಿದ್ದರು. ಆ ಪ್ರಮಾಣದ ಸರ್ಕಾರಿ ಭೂಮಿ ಒಂದೇ ಜಾಗದಲ್ಲಿ ಸಿಗುತ್ತಿರಲಿಲ್ಲ. ಆದರೂ ಭೂಮಿ ಕೊಡುತ್ತಿಲ್ಲವೆಂದು ನಿರಂತರವಾಗಿ ಸರ್ಕಾರವನ್ನು ದೂರುತ್ತಲೇ ಬಂದರು. ಈಗ ೧೦೦ ಎಕರೆ ಭೂಮಿ ಕೊಡುವಂತೆ ಕೇಳುತ್ತಿದ್ದಾರೆ. ಆ ಕುರಿತು ಎಲ್ಲಾ ಪ್ರಕ್ರಿಯೆ ಮುಗಿಸಿ ಸರ್ಕಾರಕ್ಕೆ ಕಳುಹಿಸಿದ್ದು, ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರಕಿಸಿ ಕೆಐಎಡಿಬಿಗೆ ಹಸ್ತಾಂತರಿಸುವುದಾಗಿ ಹೇಳಿದರು.

ನೂರು ಎಕರೆ ಭೂಮಿ ಕೊಡುವುದಾಗಿ ಹೇಳಿ ಭೂಮಿ ಗುರುತಿಸಿದ ನಂತರ ಜೆಡಿಎಸ್‌ನವರೇ ರೈತರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುತ್ತಿದ್ದಾರೆ. ಇದರ ಉದ್ದೇಶವೇನು. ಅದು ಪೂರ್ಣ ಪ್ರಮಾಣದ ಸರ್ಕಾರಿ ಜಾಗವಾಗಿದ್ದು, ಅಧಿಕಾರಿಗಳು ಸರ್ವೇ ಮಾಡುವುದಕ್ಕೆ ಹೋದ ಸಮಯದಲ್ಲೂ ಯಾರೂ ಜಮೀನಿನ ಬಗ್ಗೆ ಆಕ್ಷೇಪ ಎತ್ತಿರಲಿಲ್ಲ. ಫಾರಂ ನಂ-೫೩ ಅಡಿ ಸಲ್ಲಿಸಿದ್ದ ಅರ್ಜಿಗಳನ್ನು ೨೦೨೪ರಲ್ಲೇ ವಜಾಗೊಳಿಸಿರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ವೇ ಸಮಯದಲ್ಲಿ ತಕರಾರು ತೆಗೆಯದವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯಕ್ಕೆ ಬರುವ ಮುನ್ನ ಕುಮಾರಸ್ವಾಮಿ ಪತ್ರ ಬರೆದಿದ್ದರು. ಅದಾದ ಬಳಿಕ ರೈತರು ಭೂಮಿ ನಮ್ಮದು ಎಂದು ತಕರಾರು ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಭೂಮಿ ಕೊಡುವುದಕ್ಕೆ ನಮಗೆ ಯಾವುದೇ ಆಕ್ಷೇಪಣೆ, ತಕರಾರು ಇಲ್ಲ. ಕೈಗಾರಿಕೆ ತರಲು ಉತ್ಸಾಹ ತೋರುತ್ತಿರುವ ಕುಮಾರಸ್ವಾಮಿ ಅವರಿಗೆ ನಾವು ಬೆಂಬಲವಾಗಿದ್ದೇವೆ. ನನ್ನ ಮತ್ತು ಕುಮಾರಸ್ವಾಮಿ ಅವರ ನಡುವೆ ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕವಾಗಿ ನಾನು ಅವರನ್ನು ಪ್ರೀತಿಸುತ್ತೇನೆ. ಹಾಗಾಗಿ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ನಾನೆಂದಿಗೂ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದರು.

ಮಿಮ್ಸ್ ಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾವಚಿತ್ರಕ್ಕೆ ಪಟ್ಟಿ ಅಂಟಿಸಿರುವುದನ್ನು ನಾನು ಖಂಡಿಸುತ್ತೇನೆ. ಆದರೆ, ಇದನ್ನು ಕಾಂಗ್ರೆಸ್‌ನವರ ತಲೆಗೆ ಕಟ್ಟುವುದನ್ನು ನಾನು ಒಪ್ಪುವುದಿಲ್ಲ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಅಧಿಕಾರಿಗಳು ನಾಟಕ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಎರಡೂ ಪಕ್ಷದವರ ನಡುವೆ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈಗಾಗಲೇ ನೋಟೀಸ್ ಕೊಟ್ಟಿದ್ದಾರೆ. ಜೆಡಿಎಸ್ ಚಿಹ್ನೆ ಇರುವುದಕ್ಕೆ ಕಾಂಗ್ರೆಸ್‌ನವರು ತೆಗೆಸುವಂತೆ ಹೇಳಿದ್ದಾರೇಂತ ಗೊತ್ತಾಗಿದೆ. ಅಧಿಕಾರಿಗಳು ಯಾರ್ಯಾರ ಜೊತೆ ಸೇರಿಕೊಂಡಿದ್ದಾರೆ ಎನ್ನುವುದು ಹೊರ ಬರಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಗರಸಭೆ ಮಾಜಿ ಸದಸ್ಯರಾದ ಪಿ.ಶ್ರೀಧರ್, ಹರೀಶ್‌ಕುಮಾರ್, ಗುತ್ತಿಗೆದಾರ ಧನಂಜಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರ ಸಮಾನತೆ, ಮಾನವೀಯ ಸಂದೇಶ ಇಂದಿಗೂ ಪ್ರಸ್ತುತ: ಜಯರಾಮ್
ಕನಕದಾಸರ ಸಮಾಜಮುಖಿ ಸಂದೇಶಗಳು ಸಾರ್ವಕಾಲಿಕ ಸತ್ಯ-ಶಾಸಕ ಮಾನೆ