ಕೆಎಲ್‌ಇ ಆಸ್ಪತ್ರೆಯಲ್ಲಿ 100 ಹಾಸಿಗೆ ಬಡವರಿಗೆ ಮೀಸಲು

KannadaprabhaNewsNetwork |  
Published : Sep 20, 2026, 03:00 AM IST
ಡಾ. ಪ್ರಭಾಕರ ಕೋರೆ | Kannada Prabha

ಸಾರಾಂಶ

₹ 700 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೆಎಲ್‌ಇ ಆಸ್ಪತ್ರೆಯು ಜನ ಸೇವೆಯನ್ನೇ ಮುಖ್ಯವಾಗಿಸಿ ಕಾರ್ಯ ಮಾಡಲಿದ್ದು, 1200 ಹಾಸಿಗೆಗಳ ಪೈಕಿ 100 ಹಾಸಿಗೆ ಬಡವರಿಗೆ ಮೀಸಲಿದ್ದು ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಾಗುವುದು.

ಹುಬ್ಬಳ್ಳಿ:

₹ 700 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೆಎಲ್‌ಇ ಆಸ್ಪತ್ರೆಯು ಜನ ಸೇವೆಯನ್ನೇ ಮುಖ್ಯವಾಗಿಸಿ ಕಾರ್ಯ ಮಾಡಲಿದ್ದು, 1200 ಹಾಸಿಗೆಗಳ ಪೈಕಿ 100 ಹಾಸಿಗೆ ಬಡವರಿಗೆ ಮೀಸಲಿದ್ದು ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಕೆಎಲ್‌ಇ ಕಾಹೇರ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಹೇಳಿದರು.

ಇಲ್ಲಿಯ ಗಬ್ಬೂರು ಕ್ರಾಸ್‌ನಲ್ಲಿ ಶನಿವಾರ ನಡೆದ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ಮೆಡಿಕಲ್‌ ಕಾಲೇಜು ಹಾಗೂ ಕೆಎಲ್‌ಇ ಆಸ್ಪತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 22ನೇ ಶತಮಾನದ ಪೀಳಿಗೆಗೆ ಬೇಕಾದ ಆಧುನಿಕ ಸೌಲಭ್ಯಗಳನ್ನು ಈ ಆಸ್ಪತ್ರೆಗೆ ನೀಡುವ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿದ್ದ ಶಿಕ್ಷಣ ಹಾಗೂ ಆರೋಗ್ಯದ ಕೊರತೆ ನೀಗಿಸಿದಂತಾಗಿದೆ ಎಂದರು.

110 ವರ್ಷಗಳ (1916) ಹಿಂದೆ ಶಿಕ್ಷಣಕ್ಕಾಗಿ ಉತ್ತರ ಕರ್ನಾಟಕದ ಜನರು ದೂರದ ಮುಂಬೈ-ಪೂನಾಕ್ಕೆ ಹೋಗಬೇಕಿತ್ತು. ಆ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥಾಪಕರಾದ ಏಳು ಜನ ಸಪ್ತ ಋಷಿಗಳು ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ ಒದಗಿಸಲು ಸಂಸ್ಥೆ ಸ್ಥಾಪಿಸಿದ್ದು, ಇದೀಗ 320 ಅಂಗ ಸಂಸ್ಥೆಗಳು, 1.48 ಲಕ್ಷ ವಿದ್ಯಾರ್ಥಿಗಳು ಹಾಗೂ 22 ಸಾವಿರ ಶಿಕ್ಷಕರ ವಿಶ್ವವಿದ್ಯಾಲಯವಾಗಿ ರೂಪುಗೊಂಡಿದೆ. ಕಳೆದ ವರ್ಷ ಕೃಷಿ ಕಾಲೇಜು ಆರಂಭಿಸಿದ್ದು ತೋಟಗಾರಿಕೆ ಕಾಲೇಜು ಸಹ ಆರಂಭಿಸುತ್ತಿದ್ದೇವೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಸಂಶೋಧನೆಯಲ್ಲೂ ಸಂಸ್ಥೆಯು ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆಯು ದಾನದಿಂದ ರೂಪುಗೊಂಡ ಸಂಸ್ಥೆ. ಇದೀಗ ಮೂರುಸಾವಿರ ಮಠದ ಹಿರಿಯ ಜಗದ್ಗುರುಗಳು ಸಂಸ್ಥೆಗೆ 23 ಎಕರೆ ದಾನವಾಗಿ ನೀಡಿದ್ದರಿಂದ ₹ 700 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಯಿತು. 1947ರಲ್ಲಿ ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದಿಂದ 9 ಎಕರೆ ಜಮೀನು ಹಾಗೂ ₹ 1 ಲಕ್ಷ ನೀಡಿದ್ದರಿಂದ ಜೆಜೆ ಕಾಮರ್ಸ್‌ ಕಾಲೇಜು ಸ್ಥಾಪಿತವಾಗಿತ್ತು. ಇದೇ ರೀತಿ ಸಂಸ್ಥೆಯ ಬೆಳವಣಿಗೆಗೆ ನೂರಾರು ಜನರು ನೀಡಿದ ದಾನವು ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕೆಎಲ್‌ಇ ಸಂಸ್ಥೆಯು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬರೀ ಉತ್ತರ ಕರ್ನಾಟಕ ಮಾತ್ರವಲ್ಲದೇ ಏಷ್ಯಾದಲ್ಲಿಯೇ ಹೆಸರು ಮಾಡಿದೆ. ಶ್ರೀಮಠದ ಹಿರಿಯ ಗುರುಗಳ ಸಂಕಲ್ಪವು ಇಂದು ಈಡೇರಿದಂತಾಗಿದೆ. ಕೆಎಲ್‌ಇ ಸಂಸ್ಥೆಗೆ ದಾನವಾಗಿ ನೀಡಿದ ಜಾಗ ಆರೋಗ್ಯ ಸೇವೆಗೆ ಬಳಕೆಯಾಗುತ್ತಿರುವುದು ಸಮಾಧಾನ ತಂದಿದೆ. ಶ್ರೀಮಠ ನೀಡಿದ ಜಾಗಕ್ಕೆ ಬೆಲೆ ಕಟ್ಟುವುದಕ್ಕಿಂದ ಕೆಎಲ್‌ಇ ಸಂಸ್ಥೆಯು ಆ ಜಾಗದಲ್ಲಿ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿದೆ ಎಂಬುದನ್ನು ಗಮನಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಗಲು ನಿರಂತರ ೭ ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿ
ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿರುವವರ ಪೈಕಿ ನಾನೂ ಒಬ್ಬ-ಸಚಿವ ಲಮಾಣಿ