ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಹಲವು ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಆ ಪೈಕಿ ನಾನು ಒಬ್ಬನಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಹಲವು ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಆ ಪೈಕಿ ನಾನು ಒಬ್ಬನಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಹಿರೇಕೆರೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರೋನ್ ಕ್ಯಾಮೆರಾ ಮೂಲಕ ಕ್ವಾರಿಗಳ ಸರ್ವೇ ನಡೆಸಿ ನೋಟಿಸ್ ನೀಡಲಾಗಿದೆ. ಕಲ್ಲು ಕ್ವಾರಿಗಳು ಬಹಳ ಹಿಂದಿನಿಂದಲೂ ಇದ್ದು, ಕೆಲವು ಕ್ವಾರಿಗಳು ನೂರಾರು ವರ್ಷಗಳಷ್ಟು ಹಳೆಯವು. ಇಲಾಖೆ ಕ್ವಾರಿ ಲೀಸ್ ನೀಡುವ ಮುನ್ನದ ಸ್ಥಿತಿ ಹಾಗೂ ಲೀಸ್ ಪಡೆದ ನಂತರದ ಪರಿಸ್ಥಿತಿಯನ್ನು ಪರಿಗಣಿಸಿ ರಾಯಲ್ಟಿ ಲೆಕ್ಕ ಹಾಕಲಾಗಿದೆ. ಈ ಅಂಶಗಳನ್ನು ಆಧರಿಸಿ ನೋಟಿಸ್ ನೀಡಲಾಗಿದೆ ಎಂದರು.

ನಮಗೆ ಒನ್‌ಟೈಂ ಸೆಟ್ಲ್ಮೆಂಟ್‌ಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಇದನ್ನು ದಂಡ ವಿಧಿಸಲಾಗಿದೆ ಎಂದು ಹೇಳುವುದು ಸರಿಯಲ್ಲ. ಕಾನೂನುಬದ್ಧವಾಗಿ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರ್ಕಾರ ಪರಿಶೀಲಿಸಲಿದೆ. ಕಾನೂನಿನ ಪ್ರಕಾರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಡ್ರೋನ್ ಮೂಲಕ ರಾಜ್ಯದ ವಿವಿಧೆಡೆ ಕ್ವಾರಿಗಳ ಸರ್ವೇ ನಡೆಸಲಾಗಿದ್ದು, ಇದೇ ರೀತಿಯ ನೋಟಿಸ್‌ಗಳನ್ನು ಹಲವು ಕ್ವಾರಿ ಮಾಲೀಕರಿಗೆ ನೀಡಲಾಗಿದೆ. ಹೀಗಾಗಿ ತಮ್ಮ ಪ್ರಕರಣವನ್ನು ಮಾತ್ರ ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ ಎಂದರು.

ಬರ ಘೋಷಣೆಗೆ ಮಾನದಂಡ: ಹಿರೇಕೆರೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆಯೇ ಬರ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮಳೆ ಪ್ರಮಾಣ, ಬೆಳೆ ಪರಿಸ್ಥಿತಿ ಸೇರಿದಂತೆ ನಿಗದಿತ ಮಾನದಂಡಗಳನ್ನು ಪರಿಗಣಿಸಿ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುತ್ತದೆ. ವಾರದಲ್ಲಿ ನಿರ್ದಿಷ್ಟ ದಿನಗಳ ಕಾಲ ಮಳೆಯಾಗದಿರುವುದು ಸೇರಿದಂತೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.