)
ಕನ್ನಡಪ್ರಭ ವಾರ್ತೆ ಬೆಂಗಳೂರುನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಷೇರುಗಳ ಹೆಸರಿನಲ್ಲಿ ನಗರದ ಉದ್ಯಮಿ ಸೇರಿ ಹಲವರಿಗೆ ಬರೋಬ್ಬರಿ 100 ಕೋಟಿ ರು. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಉದ್ಯಮಿಗೆ ಪಾಲುದಾರಿಕೆ ಹಾಗೂ ಷೇರು ಹಂಚಿಕೆ ನೀಡುವುದಾಗಿ ಹೇಳಿ ನಂಬಿಸಿ ವಂಚಿಸಲಾಗಿದೆ. 2024 ರ ನವೆಂಬರ್‌ನಲ್ಲಿ ನನ್ನನ್ನು ನಿಷಾ ಕುಮಾರಿ ಎಂಬುವರು ಭೇಟಿ ಮಾಡಿ ನಾನು ಎನ್‌ಎಸ್‌ಇ ನಲ್ಲಿ ಆನ್ ಲಿಸ್ಟೆಡ್ ಸೆಕ್ಯೂರಿಟೀಸ್‌ನಲ್ಲಿ ಪಾಲುದಾರಳಾಗಿರುತ್ತೇನೆ ಎಂದು ಹೇಳಿ ನಿಮಗೆ ಷೇರುಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ನಂತರ ನಿಷಾಕುಮಾರಿ ಸಂಜಯ್ ದಾಮನಿ ಎಂಬುವರನ್ನು ಪರಿಚಯಿಸಿದ್ದು ಅವರು ಮುಂಬೈನಲ್ಲಿರುವ ಖಾಸಗಿ ಕಂಪನಿ ಡೈರೆಕ್ಟರ್ ಎಂಬುದಾಗಿ ತಿಳಿಸಿ ಅವರು ಇತರರನ್ನು ಪರಿಚಯಿಸಿದ್ದರು. ನಂತರ 2025 ರಲ್ಲಿ ನಾನು ಮತ್ತು ಇತರೆ ಸಾರ್ವಜನಿಕರು ಅತುಂ ಕ್ಯಾಪಿಟಲ್ ಪೈ.ಲಿ. ಜತೆಗೆ ಎನ್‌ಎಸ್‌ಇ ಷೇರುಗಳನ್ನು ಖರೀದಿ ಮಾಡಲು ಷೇರ್ ಖರೀದಿ ಅಗ್ರಿಮೆಂಟ್ ಮಾಡಿಕೊಂಡಿದ್ದೇವು. ಷೇರುಗಳ ಮೇಲೆ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ ಇವರು ನಮಗೆ ಯಾವುದೇ ಷೇರುಗಳನ್ನು ವಿತರಿಸದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉದ್ಯಮಿ ರಾಜೇಶ್ ಉಲ್ಲೇಖಿಸಿದ್ದಾರೆ.
ಇ.ಡಿಯಲ್ಲಿ ದೂರು ದಾಖಲು: ಈ ಸಂಬಂಧ ಜಾರಿ ನಿರ್ದೇಶನಾಲಯದಲ್ಲಿಯೂ ಈಗಾಗಲೇ ಈ ಸಂಬಂಧ ದೂರು ದಾಖಲಾಗಿದ್ದು, ಇದು ದೊಡ್ಡ ಮೊತ್ತದ ವಂಚನೆ ಪ್ರಕರಣವಾಗಿರುವುದರಿಂದ ಪ್ರಕರಣ ಸಿಸಿಬಿ ವರ್ಗಾವಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.